ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿದ್ದ ಡ್ರೋನ್ ಪ್ರತಾಪ್, ಇಂದು ತುಮಕೂರು ಜಿಲ್ಲೆಯ ಮಧುಗಿರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಹೊರ ಬರುತ್ತಿದ್ದಂತೆ ಡ್ರೋನ್ ಪ್ರತಾಪ್, ಪೊಲೀಸರು ತನ್ನನ್ನು ಬಂಧಿಸಿದ ಕ್ರಮವನ್ನು ಖಂಡಿಸಿ ಗುಡುಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡ್ರೋನ್ ಪ್ರತಾಪ್, ದೇಶಾದ್ಯಂತ ತುಂಬ ಜನ ಪ್ರಯೋಗದ ವಿಡಿಯೋ ಮಾಡಿದ್ದಾರೆ. ಕೆಜಿಗಟ್ಟಲೇ ಸೋಡಿಯಂ ಉಪಯೋಗಿಸಿ ಪ್ರಯೋಗ ಮಾಡಿದ್ದಾರೆ. ಅವರನ್ನು ಯಾಕೆ ನೀವು ಅರೆಸ್ಟ್ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
ನಾನು ಶೈಕ್ಷಣಿಕ ಸಂಶೋಧನೆಗಾಗಿ ಈ ಪ್ರಯೋಗ ಮಾಡಿದ್ದೆ. ಈ ಬಗ್ಗೆ ನಾನು ಸ್ಪಷ್ಟ ಪಡಿಸಿದ್ದೇನೆ. ಆದಾಗ್ಯೂ ನನ್ನನ್ನು ಮಾತ್ರ ಯಾಕೆ ಬಂಧಿಸಿದ್ದೀರಿ? ಎಂದು ಕಿಡಿಕಾರಿದ್ದಾರೆ.
ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೀಡಾಗಿ ಜೈಲು ಸೇರಿದ್ದ ಡ್ರೋನ್ ಪ್ರತಾಪ್ ಅವರಿಗೆ ಮಧುಗಿರಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಡ್ರೋನ್ ಪ್ರತಾಪ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.