ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಶನಿವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಜೀನ್ ಥೆರಪಿ ಚಿಕಿತ್ಸೆ, ರೈತರೇ ನೇರವಾಗಿ ಮಾರಾಟ ಮಾಡುವ ದ್ರಾಕ್ಷಿ, ಕಾಳುಮೆಣಸಿಗೆ ಜಿಎಸ್‌ಟಿ ವಿನಾಯಿತಿ ನೀಡಲು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಬ್ಯಾಂಕುಗಳು ಸಾಲಕ್ಕೆ ವಿಧಿಸುವ ದಂಡವನ್ನು ಸಂಗ್ರಹಿಸಿದಾಗ ಅದಕ್ಕೆ ಯಾವುದೇ ಜಿಎಸ್‌ಟಿ ಹೇರದೆ ಇರಲು ನಿರ್ಧಾರ ಕೈಗೊಳ್ಳಲಾಗಿದೆ.
ಸಾರವರ್ಧಿತ ಅಕ್ಕಿ ಮೇಲಿನ ಜಿಎಸ್ಟಿಯನ್ನು ಶೇ. 18ರಿಂದ ಶೇ. 5ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಶೇಕಡ 50ರಷ್ಟು ಹಾರು ಬೂದಿ ಬಳಸಿ ತಯಾರಿಸಿದ ಎಸಿಸಿ ಬ್ಲಾಕ್ ಗಳಿಗೆ ವಿಧಿಸುವ ಜಿಎಸ್‌ಟಿ ಶೇಕಡ 12ಕ್ಕೆ ಇಳಿಕೆ ಮಾಡಲ ತೀರ್ಮಾನಿಸಲಾಗಿದ್ದು, 2000 ರೂ.ಗಿಂತ ಕಡಿಮೆ ಮೊತ್ತದ ವಹಿವಾಟುಗಳಿಗೆ ಕೌಶಲ್ಯ ತರಬೇತಿ ಪಾಲುದಾರರಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.
ಬಳಕೆ ಮಾಡಿದ ಎಲೆಕ್ಟ್ರಿಕ್ ವಾಹನಗಳನ್ನು ಯಾವುದೇ ಕಂಪನಿಗಳು ಮಾರಾಟ ಮಾಡಿದಲ್ಲಿ ಅದರ ಲಾಭದ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ. ಇಬ್ಬರು ವ್ಯಕ್ತಿಗಳ ನಡುವೆ ಬಳಸಿದ ಎಲೆಕ್ಟ್ರಿಕ್ ವಾಹನ ಮಾರಾಟ ಖರೀದಿ ವ್ಯವಹಾರಕ್ಕೆ ತೆರಿಗೆ ಅನ್ವಯಿಸುವುದಿಲ್ಲ. ಹೊಸ ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇ. 5ರಷ್ಟು ಮುಂದುವರೆಯಲಿದೆ. ಆರೋಗ್ಯ ವಿಮೆ ಕಂತುಗಳ ಶೇಕಡ 18ರಷ್ಟು ಜಿಎಸ್‌ಟಿ ರದ್ದುಗೊಳಿಸುವ ತೀರ್ಮಾನವನ್ನು ಮಂದೂಡಲಾಗಿದೆ.