ನವದೆಹಲಿ: ಪತ್ನಿಯ ಕಾಟ ತಾಳದೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಟೆಕ್ಕಿ ಆತುಲ್ ಸುಭಾಷ್ ಅವರ ತಾಯಿ, ತಮ್ಮ ಮೊಮ್ಮಗನನ್ನು ನಮ್ಮ ಸುಪರ್ದಿಗೆ ಕೊಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಅತುಲ್ ಸುಭಾಷ್ ಅವರ 4 ವರ್ಷದ ಪುತ್ರನನ್ನು ತಮ್ಮ ಸುಪರ್ದಿಗೆ ನೀಡುವಂತೆ ಕೋರಿ ಅವರ ತಾಯಿ ಸುಪ್ರೀಂ ಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಮೊಮ್ಮಗ ಎಲ್ಲಿದ್ದಾನೆ ಎನ್ನುವುದು ಪತ್ತೆಯಾಗಿಲ್ಲ. ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ ಮತ್ತು ಆಕೆಯ ಕುಟುಂಬ ಸದಸ್ಯರು ಮೊಮ್ಮಗ ಎಲ್ಲಿದ್ದಾನೆ ಎನ್ನುವುದನ್ನು ಬಹಿರಂಪಡಿಸಿಲ್ಲ. ಮಗುವನ್ನು ಪತ್ತೆ ಮಾಡಲು ಅವರು ಅಡ್ಡಿಯಾಗಿದ್ದು, ನಮ್ಮ ಸುಪರ್ದಿಗೆ ಮೊಮ್ಮಗನನ್ನು ಕೊಡಿಸಿ ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಬಾಲಕನನ್ನು ಫರಿದಾಬಾದ್ ಬೋರ್ಡಿಂಗ್ ಶಾಲೆಗೆ ಸೇರಿಸಲಾಗಿದ್ದು, ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ನಿಖಿತಾ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಮಗುವಿನ ಬಗ್ಗೆ ಯಾವುದೇ ಮಾಹಿತಿ ಇಲ್ಲವೆನ್ನಲಾಗಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಎನ್. ಕೋಟೇಶ್ವರ್ ಸಿಂಗ್ ಅವರ ಪೀಠ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಉತ್ತರ ಪ್ರದೇಶ, ಹರಿಯಾಣ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿ ಜನವರಿ 7ಕ್ಕೆ ವಿಚಾರಣೆ ಮುಂದೂಡಲಾಗಿದೆ.