ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಸಿ ಬಂಧನಕ್ಕೊಳಗಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿ.ಟಿ. ರವಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಸುವರ್ಣಸೌಧದಲ್ಲಿಯೇ ಅವರನ್ನು ಪೊಲೀಸರು ಬಂಧಿಸಿ ಖಾನಾಪುರ ಠಾಣೆಗೆ ಕರೆತಂದಿದ್ದಾರೆ. ರಾತ್ರಿ ಇಡೀ ಅವರನ್ನು ಬೆಳಗಾವಿ, ರಾಮದುರ್ಗ, ಕಿತ್ತೂರು, ಧಾರವಾಡ ಸೇರಿ ವಿವಿಧೆಡೆ ಪೊಲೀಸ್ ವಾಹನದಲ್ಲಿ ಸುತ್ತಾಡಿಸಲಾಗಿದೆ.
ಇದರಿಂದಾಗಿ ಸಿ.ಟಿ. ರವಿ ಬಳಲಿದ್ದಾರೆ. ಈ ನಡುವೆ ಅವರ ತಲೆಗೆ ಪೆಟ್ಟಾಗಿದ್ದು, ಕಿತ್ತೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮತ್ತೆ ರೌಂಡ್ಸ್ ನಡೆಸಿದ್ದಾರೆ. ರಾಮದುರ್ಗಕ್ಕೆ ಬರುತ್ತಿದ್ದಂತೆ ಪೊಲೀಸರ ನಡೆಗೆ ಸಿ.ಟಿ. ರವಿ ಸುಸ್ತಾಗಿ ಹೋಗಿದ್ದಾರೆ.
ನಿನ್ನೆ ರಾತ್ರಿಯೇ ಅವರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದರು. ಬಿಜೆಪಿ ನಾಯಕರು, ಮುಖಂಡರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಸಿ.ಟಿ. ರವಿ ಅವರನ್ನು ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದುಕೊಂಡು ಹೋಗಲಿದ್ದಾರೆ ಹೇಳಲಾಗಿದೆ.