ಬೆಳಗಾವಿ: 371(ಜೆ) ಕಾಯ್ದೆಯನ್ವಯ ರಾಜ್ಯದಾದ್ಯಂತ ಸರ್ಕಾರಿ ನೇಮಕಾತಿಯಲ್ಲಿ ರಾಜ್ಯಮಟ್ಟದ ಸ್ಥಳೀಯ ವೃಂದದ ನೇರ ನೇಮಕಾತಿಯಲ್ಲಿ 9695 ಹುದ್ದೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ 5977 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ತಿಳಿಸಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
371(ಜೆ) ಅಡಿ ವಿವಿಧ ನೇಮಕಾತಿ ಸಂಸ್ಥೆಗಳಲ್ಲಿ 1,658 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಇನ್ನು 2,035 ಹುದ್ದೆಗಳ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕಿದೆ. ಈಗಾಗಲೇ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಕ್ರಮವಹಿಸಲು ಎಲ್ಲಾ ಇಲಾಖೆಗಳಿಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
371(ಜೆ) ಅಡಿಯಲ್ಲಿ ನೇಮಕವಾಗಿರುವ ನೌಕರರು ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಸದರಿ ಅಂಶಗಳನ್ನು ಆದ್ಯತೆ ಮೇಲೆ ಚರ್ಚಿಸಿ, ಸಂಬಂಧಪಟ್ಟ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳಿಗೆ ಲಿಖಿತ ಸೂಚನೆ ನೀಡುವುದರ ಮೂಲಕ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.