ಬೆಂಗಳೂರು: ಪಿಎಸ್ಐ, ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದಡಿ ಬ್ಯಾಟರಾಯನಪುರ ಠಾಣೆ ಹೆಡ್ ಕಾನ್ ಸ್ಟೇಬಲ್ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಲಾಗಿದೆ.
ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿ ದೂರು ನೀಡಿದ್ದು, ಕುಡಿದು ಬಂದು ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳನ್ನು ಹೆಡ್ ಕಾನ್ಸ್ಟೇಬಲ್ ಹಿತೇಂದ್ರ ನಿಂದಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ಅಕ್ರಮ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೇಂದ್ರ ಸಚಿವ ಸೋಮಣ್ಣ ಮತ್ತು ಶಾಸಕ ಕೃಷ್ಣಪ್ಪ ಅವರ ಹೆಸರು ಬಳಸಿ ಕಿರುಕುಳ ನೀಡುತ್ತಿದ್ದಾರೆ. ದೂರುಗಳಿಗೆ ಕೇಸು ದಾಖಲಿಸದೆ ರಾಜೀ ಮಾಡಿ ಹಣ ಪಡೆದುಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬ್ಯಾಟರಾಯನಪುರ ಠಾಣೆ ಸಿಬ್ಬಂದಿ ಸಹೋದ್ಯೋಗಿ ವಿರುದ್ಧವೇ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ನೀಡಲು ಪಶ್ಚಿಮ ವಿಭಾಗದ ಡಿಸಿಪಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಸೂಚನೆ ನೀಡಿದ್ದಾರೆ.