ಬೆಳಗಾವಿ: ಬಹು ಮಾಲೀಕತ್ವದ ಖಾಸಗಿ ಒಡೆತನದ ಪಹಣಿಗಳನ್ನು ಏಕವ್ಯಕ್ತಿ ಪಹಣಿಗಳನ್ನಾಗಿ ಮಾಡುವ ಉದ್ದೇಶದ ಪೋಡಿ ಮುಕ್ತ ಯೋಜನೆಯಡಿ ರಾಜ್ಯದಲ್ಲಿ ಈಗಾಗಲೇ 16,644 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳಾಗಿ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಭೂ ಮಾಪನ ಇಲಾಖೆಯಲ್ಲಿ ಕಳೆದ 3 ವರ್ಷಗಳಲ್ಲಿ ವಿವಿಧ ರೀತಿಯ 6,62,825 ಪೋಡಿ ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 5,33,545 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಪ್ರಕರಣಗಳಲ್ಲಿನ ನ್ಯೂನತೆಗಳನ್ನು ಶೀಘ್ರವಾಗಿ ಸರಿಪಡಿಸಿಕೊಂಡು ವಿಳಂಬವಿಲ್ಲದೆ ಪೋಡಿ ದುರಸ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಂದಾಯ ಮತ್ತು ಸರ್ವೆ ಇಲಾಖೆಗಳ ಹಳೆಯ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡೇಟಾಬೇಸ್ ನಲ್ಲಿ ಸಂರಕ್ಷಿಸಲು ಭೂ ಸುರಕ್ಷಾ ಯೋಜನೆ ಜಾರಿಗೊಳಿಸಲಾಗಿದೆ. 31 ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಭೂಸುರಕ್ಷೆ ಯೋಜನೆಯನ್ನು ಉಳಿದ 210 ತಾಲ್ಲೂಕುಗಳಿಗೂ ವಿಸ್ತರಿಸುವುದಾಗಿ ತಿಳಿಸಿದ್ದಾರೆ.
ಮೂಲ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ 31 ತಾಲ್ಲೂಕುಗಳಲ್ಲಿ ಪೂರ್ಣಗೊಂಡಿದೆ. 2025ರ ಡಿಸೆಂಬರ್ ವೇಳೆಗೆ ಉಳಿದ ತಾಲೂಕುಗಳಲ್ಲಿಯೂ ದಾಖಲೆಗಳ ಸ್ಕ್ಯಾನಿಂಗ್ ಆಗಲಿದ್ದು, ಜನರಿಗೆ ಆನ್ಲೈನ್ ನಲ್ಲಿಯೂ ದಾಖಲೆಗಳು ಲಭ್ಯವಾಗಲಿವೆ. ಪ್ರಮುಖ ದಾಖಲೆಗಳ ಮೂಲ ಪ್ರತಿಯನ್ನು ತಾಲೂಕು ಮಟ್ಟದಲ್ಲಿ ವೈಜ್ಞಾನಿಕವಾಗಿ ಸಂರಕ್ಷಿಸಲು ತಾಲೂಕಿಗೆ ಒಂದು ಕಾಂಪ್ಯಾಕ್ಟರ್ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಜರಾಯಿ ಆಸ್ತಿಗಳ ಸಂರಕ್ಷಣೆಯನ್ನು ಅಭಿಯಾನ ಮಾದರಿಯಲ್ಲಿ ಕೈಗೊಳ್ಳಲಾಗುತ್ತಿದೆ. ಈ ವರ್ಷ ರಾಜ್ಯದಲ್ಲಿ 5,022 ಮುಜರಾಯಿ ಆಸ್ತಿಗಳನ್ನು ಮುಜರಾಯಿ ಇಲಾಖೆಗೆ ಖಾತೆ ಮಾಡಿಕೊಡುವ ಮೂಲಕ ಸಂರಕ್ಷಣೆ ಮಾಡಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಮುಜರಾಯಿ ಆಸ್ತಿಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.