ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯೇ ದೋಷಪೂರಿತ ಎಂದು ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದಾರೆ.
ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಹೈಕೋರ್ಟ್ ನಲ್ಲಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹಿರಿಯ ವಕೀಲ ಸಿ.ವಿ.ನಾಗೇಶ್ ಇಂದು ಯಡಿಯೂರಪ್ಪ ಪರ ವಾದ ಮಂಡನೆ ಮಾಡಿದರು. ಈ ವೇಳೆ ಸಂತ್ರಸ್ತೆಯ ದೂರುದಾರ ತಾಯಿಯ ನಡವಳಿಕೆ ಗಮನಿಸಬೇಕು. ಅಧಿಕಾರಿಗಳು, ರಾಜಕಾರಣಿಗಳ ಮೇಲೆ 56 ದೂರು ನೀಡಿದ್ದಾರೆ. ಘಟನೆ ನಡೆದಿದೆ ಎನ್ನಲಾದ ಒಂದೂವರೆ ತಿಂಗಳ ಬಳಿಕ ಕೇಸ್ ದಾಖಲಾಗಿದೆ. ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂಬ ಬಾಲಕಿ ಹೇಳಿಕೆ ಇದೆ. ಹಲವು ಜನರ ಸಮ್ಮುಖದಲ್ಲಿ ಈ ಘಟನೆ ನಡೆಯಲು ಸಾಧ್ಯವೇ? ಕೇವಲ ಬಾಲಕಿ ಹೇಳಿಕೆ ಆಧರಿಸಿ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಥಳದಲ್ಲಿದ್ದವರು ಹೇಳಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ತನಿಖೆಯೇ ದೋಷಪೂರಿತವಾಗಿದೆ ಎಂದು ವಾದ ಮಂಡಿಸಿದ್ದಾರೆ.
ವಾದ ಆಲಿಸಿದ ಹೈಕೋರ್ಟ್, ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.