ಮಧ್ಯಪ್ರದೇಶದ ಛತ್ತರ್ಪುರದಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ವರನೊಬ್ಬ ಮದುವೆಯಾಗಿ ವಧುವನ್ನು ಮನೆಗೆ ಕರೆ ತಂದಿದ್ದು, ಮೊದಲ ರಾತ್ರಿ ಆತನಿಗೆ ದುಃಸ್ವಪ್ನವಾಗಿ ಕಾಡಿದೆ. ವಧು, ವರನಿಗೆ ಕುಡಿಯಲು ಹಾಲು ಕೊಟ್ಟಿದ್ದು, ಇದನ್ನು ಕುಡಿದ ಕೂಡಲೇ ವರ ಪ್ರಜ್ಞೆ ತಪ್ಪಿಬಿದ್ದಿದ್ದಾನೆ. ಅವನಿಗೆ ಪ್ರಜ್ಞೆ ಮರಳಿದಾಗ ವಧು ಕಾಣೆಯಾಗಿದ್ದು, ಆಕೆ ವಿಷಯುಕ್ತ ಹಾಲು ನೀಡಿದ್ದ ಕಾರಣ ಆರೋಗ್ಯ ಹದಗೆಟ್ಟಿತ್ತೆನ್ನಲಾಗಿದೆ. ಬಳಿಕ ಕುಟುಂಬಸ್ಥರು ವರನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಪ್ರಕರಣವು ನೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಲವಾರ ಗ್ರಾಮದಲ್ಲಿ ನಡೆದಿದ್ದು, ಮದುವೆಯಾದ 24 ಗಂಟೆಗಳ ಒಳಗೆ ವಧು ಪರಾರಿಯಾಗಿದ್ದಾಳೆ. ಅವಳು ತನ್ನ ಗಂಡನಿಗೆ ಹಾಲಿನಲ್ಲಿ ವಿಷಯುಕ್ತ ಪದಾರ್ಥವನ್ನು ಬೆರೆಸಿ ನೀಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳೊಂದಿಗೆ ಕಾಣೆಯಾಗಿದ್ದಾಳೆ. ವರ ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವರನ ತಂದೆಯ ದೂರಿನ ಮೇರೆಗೆ, ಪೊಲೀಸರು ವಧು, ಅವಳ ಸಹೋದರ ಮತ್ತು ಸಹೋದರನ ಸ್ನೇಹಿತ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದು, ಅಶೋಕ್ ರಾವತ್ ಅವರ 29 ವರ್ಷದ ಪುತ್ರ ರಾಜದೀಪ್ ರಾವತ್ ಡಿಸೆಂಬರ್ 11 ರಂದು ಚರ್ಖಾರಿ ನಿವಾಸಿ ಖುಷಿ ತಿವಾರಿ ಎಂಬಾಕೆಯನ್ನು ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದರು.
ಯುವತಿಯ ಸಹೋದರ ಚೋಟು ತಿವಾರಿ, ಅವನ ಸ್ನೇಹಿತ ವಿನಯ್ ತಿವಾರಿ ಮತ್ತು ಇತರರು ಮದುವೆಗೆ ಹಾಜರಾಗಿದ್ದು, ಡಿಸೆಂಬರ್ 12 ರಂದು ಮೊದಲ ರಾತ್ರಿ ಏರ್ಪಡಿಸಲಾಗಿತ್ತು. ವಧು ತನ್ನ ಪತಿ ರಾಜದೀಪ್ ರಾವತ್ ಗೆ ಹಾಲು ಕುಡಿಯಲು ನೀಡಿದ್ದು, ಕುಡಿದ ಕೂಡಲೇ ಆತ ಪ್ರಜ್ಞೆ ಕಳೆದುಕೊಂಡಿದ್ದ. ನಂತರ ವಧು ಮದುವೆಯಲ್ಲಿ ನೀಡಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಜೊತೆಗೆ ಪರಾರಿಯಾಗಿದ್ದಾಳೆ.