ತುಮಕೂರು: ಸಣ್ಣ ನೀರಾವರಿ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ನೌಕರರ ನಡುವಿನ ಜಗಳ ತಾರಕಕ್ಕೇರಿದ್ದು, ಅಧಿಕಾರಿಗಳನ್ನು ಕಚೇರಿಯಲ್ಲಿಯೇ ಕೂಡಿ ಹಾಕಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ವಿದ್ಯಾನಗರದಲ್ಲಿರುವ ಸಣ್ಣ ನೀರಾವರಿ ಕಚೇರಿಯಲ್ಲಿ ಅಧಿಕಾರಿಗಳು ಕಚೇರಿಯಲ್ಲಿರುವಾಗಲೇ ಅಟೆಂಡರ್, ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಕೆ.ಎಂ.ಅಜಾಜ್ ಪಾಷ ಅಎಂಬ ಅಟೆಂಡರ್ ಈ ಕೃತ್ಯವೆಸಗಿದ್ದಾರೆ.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಪ್ಪೇಸ್ವಾಮಿ, ಇಬ್ಬರು ಇಂಜಿನಿಯರ್ ಸೇರಿ 7 ಜನ ಸಿಬ್ಬಂದಿಗಳು ಕಚೇರಿ ಒಳಗೆ ಇದ್ದರು. ಈ ವೇಳೆ ಕಚೇರಿಗೆ ಬೀಗ ಹಾಕಿ ಅಟೆಂಡರ್ ಎಸ್ಕೇಪ್ ಆಗಿದ್ದಾರೆ.
ಬಳಿಕ ಇಂಜಿನಿಯರ್ ತಿಪ್ಪೇಸ್ವಾಮಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಅಜಾಜ್ ಪಾಷಾಗೆ ಕರೆ ಮಾಡಿ ಕಚೇರಿಗೆ ಕರೆಸಿದ್ದಾರೆ.
ಈ ವೇಳೆ ಅಜಾಜ್ ಪಾಷಾ, ಅಧಿಕಾರಿಗಳು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಬದಲವಣೆಯಾಗಿಲ್ಲ. ಪದೇ ಪದೇ ಅವಮಾನ ಮಾಡುತ್ತಿರುವುದಕ್ಕೆ ಬೇಸತ್ತು ಅಧಿಕಾರಿಗಳನ್ನು ಕೂಡಿ ಹಾಕಿ ಹೋಗಿದ್ದಾಗಿ ತಿಳಿಸಿದ್ದಾರೆ.