ಝಾರ್ಖಂಡ್ನ ದೇವಘರ್ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭವೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ತೀವ್ರ ಶೀತದಿಂದ ಬಳಲುತ್ತಿದ್ದ ವರ ನಿಶ್ಯಕ್ತಿಯಿಂದ ಬಿದ್ದ ಕಾರಣ ವಧು ಮದುವೆಯನ್ನು ರದ್ದುಗೊಳಿಸಿದ್ದಾಳೆ.
ದೇವಘರ್ನ ಘೋರ್ಮಾರದ ಅರ್ನವ್ ಎಂಬ ವರ ಬಿಹಾರದ ಭಾಗಲ್ಪುರದ ಅಂಕಿತ ಎಂಬುವರನ್ನು ವಿವಾಹವಾಗಬೇಕಿತ್ತು. ಆದರೆ ಡಿಸೆಂಬರ್ 15ರಂದು ನಡೆಯಬೇಕಿದ್ದ ಮದುವೆಯು ಅರ್ನವ್ ಬಿದ್ದ ಕಾರಣ ರದ್ದಾಗಿದೆ. ಅಂಕಿತ, ಅರ್ನವ್ಗೆ ಆರೋಗ್ಯ ಸಮಸ್ಯೆ ಇದೆ ಎಂದು ಶಂಕಿಸಿ ಮದುವೆಯನ್ನು ಮುಂದುವರಿಸಲು ನಿರಾಕರಿಸಿದ್ದಾರೆ.
ಸಾಮಾನ್ಯವಾಗಿ ವರನ ಕಡೆಯಿಂದ ವಧುವಿನ ಮನೆಗೆ ಮೆರವಣಿಗೆ ಹೋಗುವ ಸಂಪ್ರದಾಯವಿದೆ. ಆದರೆ ಈ ಮದುವೆಯಲ್ಲಿ ವಿಭಿನ್ನವಾಗಿ ವಧುವಿನ ಕಡೆಯಿಂದ ಮೆರವಣಿಗೆ ವರನ ಮನೆಗೆ ಹೋಗುತ್ತಿತ್ತು. ಇದರಿಂದಾಗಿ ಅಂಕಿತ ಕಳವಳ ವ್ಯಕ್ತಪಡಿಸಿದ್ದರು.
ಘೋರ್ಮಾರದ ಖಾಸಗಿ ತೋಟದಲ್ಲಿ ಮದುವೆ ನಡೆಯಬೇಕಿತ್ತು. ವಧುವಿನ ಕುಟುಂಬಸ್ಥರು ಅದ್ದೂರಿಯಾಗಿ ವರನ ಮನೆಗೆ ಬಂದರು. ಎಲ್ಲಾ ವಿಧಿ-ವಿಧಾನಗಳನ್ನು ಸಂಪ್ರದಾಯದಂತೆ ನಡೆಸಲಾಯಿತು. ತೆರೆದ ವೇದಿಕೆಯಲ್ಲಿ ನಡೆದ ವರಮಾಲೆಯ ಸಮಾರಂಭವೂ ಸಹ ಸಂಪನ್ನವಾಯಿತು.
ನಂತರ ಎರಡೂ ಕುಟುಂಬಗಳು ಮತ್ತು ವಧು-ವರರು ಭೋಜನ ಸೇವಿಸಿ ಮದುವೆಯ ಮುಂದಿನ ಪ್ರಕ್ರಿಯೆಗಳಿಗೆ ಸಿದ್ಧರಾದರು. ತೆರೆದ ವೇದಿಕೆಯಲ್ಲಿ ಮಂಟಪವನ್ನು ಸಿದ್ಧಪಡಿಸಲಾಗಿತ್ತು. ಪುರೋಹಿತರು ಮಂತ್ರೋಚ್ಚಾರ ಮಾಡುತ್ತಿದ್ದ ವೇಳೆ ಅರ್ನವ್ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾರೆ.
ಅರ್ನವ್ ಕುಟುಂಬಸ್ಥರು ಕೂಡಲೇ ಕೊಠಡಿಗೆ ಕರೆದೊಯ್ದು ಪ್ರಜ್ಞೆ ಮರಳಿಸಲು ಪ್ರಯತ್ನಿಸಿದ್ದು, ಸ್ಥಳೀಯ ವೈದ್ಯರನ್ನು ಕರೆಸಲಾಯಿತು. ಒಂದೂವರೆ ಗಂಟೆಗಳ ಕಾಲ ಪ್ರಯತ್ನದ ನಂತರ ಅರ್ನವ್ ಪ್ರಜ್ಞೆ ಮರಳಿದ್ದು, ಆದರೆ ಅಂಕಿತ ಮದುವೆಯನ್ನು ಮುಂದುವರಿಸಲು ನಿರಾಕರಿಸಿದರು.
ಅರ್ನವ್ಗೆ ಆರೋಗ್ಯ ಸಮಸ್ಯೆ ಇದೆ ಎಂದು ಅಂಕಿತ ಶಂಕಿಸಿದರಲ್ಲದೆ, ತಮ್ಮ ಕುಟುಂಬವನ್ನು ಕರೆಸಿಕೊಂಡಿದ್ದನ್ನು ಪ್ರಶ್ನಿಸಿದ್ದಾರೆ. ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರನ್ನು ಕರೆಸಿ ವಿವಾದವನ್ನು ಬಗೆಹರಿಸುವಂತೆ ವಧುವಿನ ಕುಟುಂಬ ವಿನಂತಿಸಿದೆ.
ಪೊಲೀಸರು ಎರಡೂ ಕಡೆಯವರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ ಮರುದಿನ ಬೆಳಗಿನವರೆಗೂ ಪರಿಸ್ಥಿತಿ ಸುಧಾರಣೆಯಾಗದ ಕಾರಣ ಮದುವೆಯನ್ನು ರದ್ದುಗೊಳಿಸಲಾಯಿತು.