ಗದಗ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದರೂ ಈವರೆಗೂ ಉತ್ತರ ಕರ್ನಾಟಕ ಭಾಗದ ವಿಚಾರವಾಗಿ ಯಾವುದೇ ಚರ್ಚೆ ನಡೆಯದಿರುವ ಬಗ್ಗೆ ಆ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು, ಇದೀಗ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಸೋಮವಾರದಿಂದ ಬುಧವಾರದವರೆಗೆ ಮೂರು ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಗದಗ ಜಿಲ್ಲೆಯ ರೋಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು.
ವಕ್ಫ್ ವಿಚಾರದಲ್ಲಿ ಬಿ.ವೈ.ವಿಜಯೇಂದ್ರ 150 ಕೋಟಿ ಆಮಿಷ ಒಡ್ಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಅನ್ವರ್ ಮಾನಪ್ಪಾಡಿ ಅವರು ಅವರದೇ ವಿಡಿಯೊದಲ್ಲಿ ನೀಡಿದ ಹೇಳಿಕೆ ಆಧಾರದ ಮೇಲೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದರು.
ಸಿಬಿಐ ತನಿಖೆಗೆ ಕೊಟ್ಟರೆ ಕಾಂಗ್ರೆಸ್ಸಿನವರೇ ಸಿಕ್ಕಿ ಬೀಳ್ತಾರೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಉತ್ತರಿಸಿದ ಸಿಎಂ, ಮೊದಲು CBI ತನಿಖೆಗೆ ಕೊಡ್ಲಿ ಎಂದರು. ವಿಡಿಯೊದಲ್ಲಿರುವ ಧ್ವನಿ ಮಾನಪ್ಪಾಡಿ ಅವರದ್ದೋ ಅಲ್ವೋ ಎಂದು ಮಾಧ್ಯಮದವರಿಗೇ ಚೆನ್ನಾಗಿ ಗೊತ್ತಿರತ್ತೆ ತಾನೇ ಎಂದರು.