ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳಿಂದ ಬೃಹತ್ ಸಂಕೀರ್ತನಾ ಯಾತ್ರೆ ನಡೆಯುತ್ತಿದ್ದು, ಜಾಮಿಯಾ ಮಸೀದಿ ಬಳಿ ಹನುಮಮಾಲಾಧಾರಿಗಳು ಜಮಾವಣೆಗೊಂಡಿದ್ದಾರೆ.
ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಸ್ಥಾನದಿಂದ ಆರಂಭವಾದ ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ಮುಂಭಾಗದಿಂದ ಸಾಗಿ ರಂಗನಾಥಸ್ವಾಮಿ ದೇವಸ್ಥಾನದವರೆಗೆ ಸಾಗಲಿದೆ. ಜಾಮಿಯಾ ಮಸೀದಿ ಬಳಿ ಸಂಕೀರ್ತನಾ ಯಾತ್ರೆ ಬಂದು ತಲುಪುತ್ತಿದ್ದಂತೆ ಯಾತ್ರೆಯಲ್ಲಿ ಭಾಗಿಯಾಗಿರುವ ಹನುಮ ಭಕ್ತರು ಮಸೀದಿ ಬಳಿ ಜಮಾವಣೆಗೊಂಡಿದ್ದಾರೆ. ಮಸೀದಿ ಬಳಿ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಹನುಮ ಮಾಲಾಧಾರಿಗಳನ್ನು ತಡೆದಿದ್ದಾರೆ. ಪೊಲೀಸರು ಹಾಗೂ ಹನುಮ ಮಾಲಾಧಾರಿಗಳ ನಡುವೆ ನೂಕಟ ತಳ್ಳಾಟ ನಡೆದಿದ್ದು, ಸ್ಥಳದಲ್ಲಿ ಹೈಡ್ರಾಮಾ ನಡೆದಿದೆ.
ಹನುಮ ಮಾಲಾಧಾರಿಗಳಿಗೆ ಸಂಕೀರ್ತನಾ ಯಾತ್ರೆಯಲ್ಲಿ ಮುಂದೆ ಸಾಗುವಂತೆ ಸೂಚಿಸಿದರೂ ಮಸೀದಿ ಬಳಿ ಬಂದು ನಿಂತಿರುವುದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ದೇವಸ್ಥಾನವನ್ನು ಕೆಡವಿ ಟಿಪ್ಪು ಸುಲ್ತಾನ್ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದ. ಇದಕ್ಕೆ ಈಗಲೂ ಇಲ್ಲಿರುವ ಕಲ್ಯಾಣಿ, ನಾಗರ ಕಲ್ಲುಗಳು ಹಾಗೂ ಇತರೆ ಕುರುಹುಗಳು ಸಾಕ್ಷಿಯಾಗಿವೆ. ಹೀಗಾಗಿ ಜಾಮಿಯಾ ಮಸೀದಿ ಕೆಡವಿ ಮೂಡಲ ಬಾಗಿಲು ಆಂಜನೇಯ ದೇವಸ್ಥಾನ ಮರುಸ್ಥಾಪನೆ ಮಾಡಬೇಕೆಂದು ಸಂಕಲ್ಪ ಕೈಗೊಂಡು ಹಲವು ವರ್ಷಗಳಿಂದ ಹಿಂದೂ ಜಾಗರಣಾ ವೇದಿಕೆ, ಹಿಂದೂ ಪರ ಸಂಘಟನೆಗಳು ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ಮಾಡಿಕೊಂಡು ಬಂದಿವೆ.