ಹುಬ್ಬಳ್ಳಿ: ಸವದತ್ತಿ ಯಲ್ಲಮ್ಮ ಭಕ್ತರಿಗೆ ಗುಡ್ ನ್ಯೂಸ್. ಶ್ರೀರೇಣುಕಾ ಯಲ್ಲಮ್ಮ ದೇವಿ ದರ್ಶನಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗಲೆಂದು ವಾರದಲ್ಲಿ ಎರಡು ದಿನ ಹುಬ್ಬಳ್ಳಿಯಿಂದ ಬೆಳಗಾವಿಯ ಸವದತ್ತಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ನಾಳೆ ಭಾನುವಾರ ಹುಣ್ಣಿಮೆಯಂದು ಹಾಗೂ ಅಮವಾಸ್ಯೆಯವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಬಸ್ ಸೇವೆ ಕಲ್ಪಿಸಲಾಗುತ್ತಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಳೆದ ಶೀಗೆ ಹುಣ್ಣಿಮೆ, ದೀಪಾವಳಿ ಅಮವಾಸ್ಯೆ ಹಾಗೂ ನಂತರದ ಹುಣ್ಣಿಮೆಗಳ ಸಮಯದಲ್ಲಿ ಸವದತ್ತಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ನೇರ ಬಸ್ ಗಳಿಂದಾಗಿ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದ್ದು, ಹಾಗಾಗಿ ಈಗಲು ಬಸ್ ವ್ಯವಸ್ಥೆ ಮುಂದುವರೆಸಲಾಗುತ್ತಿದೆ. ಬರುವ ಹುಣ್ಣಿಮೆ, ಮಂಗಳವಾರ ಹಾಗೂ ಶುಕ್ರವಾರದಂದು ಹುಬ್ಬಳ್ಳಿಯಿಂದ ಸವದತ್ತಿಯ ಯಲ್ಲಮ್ಮನ ಗುಡ್ಡಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಡಿಸೆಂಬರ್ 15ರಂದು ಭಾನುವಾರದಿಂದ ಮುಂದಿನ ಅಮವಾಸ್ಯೆವರೆಗೆ ಪ್ರತಿ ಮಂಗಳವಾರ, ಶುಕ್ರವಾರ ಅಂದರೆ ಡಿ.17, 20, 24 ಹಾಗೂ 27ರಂದು ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ಬಸ್ ವ್ಯವಸ್ಥೆ ಇರಲಿದೆ.