ಬೆಂಗಳೂರು: ನೋಂದಣಿ ಅಕ್ರಮಕ್ಕೆ ಕಡಿವಾಣ ಹಾಕಲು ಅನೇಕ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಭೌಗೋಳಿಕ ದತ್ತಾಂಶ(ಜಿಐಎಸ್) ಆಧಾರಿತ ತಂತ್ರಾಂಶ ರೂಪಿಸಲು ಮುಂದಾಗಿದೆ.
ಇದರ ಮೂಲಕ ನೋಂದಣಿ ಮುದ್ರಾಂಕ ವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ. ನೋಂದಣಿಯ ಸಂದರ್ಭದಲ್ಲಿ ನಿರ್ದಿಷ್ಟ ಆಸ್ತಿ ಇರುವ ಪ್ರದೇಶ ಯಾವ ರಸ್ತೆಗೆ ಸೇರಿದೆ ಎಂಬುದನ್ನು ಲೆಕ್ಕಹಾಕಿ ಅದರ ಪ್ರಕಾರ ಮುದ್ರಾಂಕ ಶುಲ್ಕ ವಸೂಲಿ ಮಾಡಿ ತೆರಿಗೆ ಹೆಚ್ಚಳ ಗುರಿ ಹೊಂದಲಾಗಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ಮೊದಲ ಹಂತದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಿಐಎಸ್ ಆಧಾರಿತ ನೋಂದಣಿ ವ್ಯವಸ್ಥೆ ಜಾರಿಗೊಳಿಸಲಿದ್ದು, ಬಳಿಕ ಹಂತ ಹಂತವಾಗಿ ನಗರಗಳಿಗೆ ವಿಸ್ತರಿಸಲಾಗುತ್ತದೆ. ಇನ್ನು 15 ದಿನದಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಹೊಸದುರ್ಗ, ನೆಲಮಂಗಲ ತಾಲೂಕುಗಳಲ್ಲಿ ಜಾರಿಗೆ ಬರಲಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಇಡೀ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗುವುದು.
ನೋಂದಣಿಯಾಗುವ ಆಸ್ತಿ ಎಲ್ಲಿ ಇದೆ ಎನ್ನುವುದರ ಮೇಲೆ ನಿಗಾ ವಹಿಸಲಿದ್ದು, ಎಷ್ಟು ಪ್ರದೇಶ ಮಾರಾಟ ಎನ್ನುವ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತದೆ. ಸ್ವಯಂ ಚಾಲಿತವಾಗಿ ಮುದ್ರಾಂಕ ದರದ ಲೆಕ್ಕಾಚಾರ ನಡೆಯಲಿದ್ದು, ದರ ಪಾವತಿಸಿ ದಾಖಲೆಗಳನ್ನು ಸಲ್ಲಿಸಿದ ನಂತರ ನೋಂದಣಿ ಮಾಡಲಾಗುವುದು. ಮುದ್ರಾಂಕಕ್ಕೆ ಸರ್ವೇ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ಎಷ್ಟು ಪ್ರದೇಶ ಮಾರಾಟ ಎಂದು ನಮೂದಿಸಿದರೆ ದರ ನಿಗದಿಯಾಗುತ್ತದೆ.
ನೋಂದಣಿಯಲ್ಲಿ ಆಗುತ್ತಿರುವ ಮೋಸ ತಡೆಗಟ್ಟಲು ಜಿಐಎಸ್ ಆಧಾರಿತ ನೋಂದಣಿ ವ್ಯವಸ್ಥೆ ಹೊಸ ತಂತ್ರಾಂಶದ ಮೂಲಕ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.