ಚಿತ್ರದುರ್ಗ: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ದರ್ಶನ್ ಹಾಗೂ ಗ್ಯಾಂಗ್ ಗೆ ಜಾಮೀನು ಬೆನ್ನಲ್ಲೇ ಮೃತ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಶಿನಾಥಯ್ಯ, ತಾತ್ಕಾಲಿಕವಾಗಿ ಆರೋಪಿಗಳಿಗೆ ಜಾಮೀನು ಸಿಕ್ಕಿರಬಹುದು. ಆದರೆ ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಅಂತಿಮವಾಗಿ ಆರೋಪಿಗಳಿಗೆ ಶಿಕ್ಷೆಯಾಗುವ ನಂಬಿಕೆಯಿದೆ ಎಂದು ತಿಳಿಸಿದ್ದಾರೆ.
ನಮ್ಮ ಮಗನ್ನನ್ನು ಕೊಂದ ಆರೋಪಿಗಳಿಗೆ ಜಾಮೀನು ಸಿಕಿರುವುದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗುವ ವಿಶ್ವಾಸವಿದೆ. ನಾವು ಸಿಎಂ ಹಾಗೂ ಸರ್ಕಾರದ ಮೇಲೆ ಯಾವುದೇ ಒತ್ತಡ ಹಾಕಲ್ಲ, ಯೋಚಿಸುತ್ತೇವೆ ಎಂದರು.
ಇದೇ ವೇಳೆ ದರ್ಶನ್ ಮಾತುಕತೆಗೆ ಬರಬಹುದು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಶಿನಾಥಯ್ಯ, ದರ್ಶನ್ ಮಾತುಕತೆಗೆ ಬರುವ ವಿಚಾರವಿಲ್ಲ. ನಾವು ಮಗನನ್ನು ಕಳೆದುಕೊಂಡಿರುವ ದು:ಖದಲ್ಲಿದ್ದೇವೆ. ನಮಗೆ ಮಗ ಬೇಕು ಹೊರತು ಯಾರ ಮಾತುಕತೆಯೂ ಬೇಕಿಲ್ಲ. ಸರ್ಕಾರ ನಮ್ಮ ಸೊಸೆ ಸಹನಾಳಿಗೆ ಸರ್ಕಾರಿ ನೌಕರಿ ನೀಡಲಿ ಎಂದು ಭಾವುಕರಾದರು.