ಮೈಸೂರು: ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಹರಕೆಯಾಗಿ ಭಕ್ತರು ಕೊಟ್ಟಿದ್ದ ಸೀರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿಡಿಯೋ ಬಿಡಿಗಡೆ ಮಾಡಿದ್ದರು. ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದೀಗ ಈ ಪ್ರಕರಣ ಸಂಬಂಧ ಕಾರ್ಯದರ್ಶಿ ರೂಪಾ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಯದರ್ಶಿ ರೂಪಾ, ಉನ್ನತ ಅಧಿಕಾರಿಯಾಗಿ ನಾನೇಕೆ ಸೀರೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಿ? ಅದು ಸೀರೆಯಲ್ಲ ಸೀರೆಯಲ್ಲಿ ಕಟ್ಟಿದ್ದ ಕಡತ ಎಂದು ತಿಳಿಸಿದ್ದಾರೆ.
ಸೀರೆಯಲ್ಲಿ ಕಟ್ಟಿದ್ದ ಕಡತಗಳು. ಕಡತಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದೇನೆ. ಕಡತ ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿದೆ. ಇಲ್ಲಿ ಮಾತ್ರವಲ್ಲ ಎಲ್ಲಾ ಇಲಾಖೆಯಲ್ಲಿಯೂ ಇದಕ್ಕೆ ಅವಕಾಶವಿದೆ. ಅದೇ ರೀತಿ ಕಡತಗಳನ್ನು ನಾನು ಮನೆಗೆ ತೆಗೆದುಕೊಂಡು ಹೇಗಿದ್ದೆ ಎಂದು ಸ್ಪಷ್ಟಪಡಿಸಿದರು.
ನನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳು. ಓರ್ವ ಉನ್ನತಾಧಿಕಾರಿಯಾಗಿ ನಾನೇಕೆ ಸೀರೆ ಕದಿಯಲಿ? ಚಾಮುಂಡಿ ಬೆಟ್ಟದಲ್ಲಿ ನಾನು ಅಧಿಕಾರ ವಹಿಸಿಕೊಂಡಾಗಿನಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇದು ಕೂಡ ಅದರ ಒಂದು ಭಾಗ. ಕೇವಲ ಸೀರೆ ಕೌಂಟರ್ ಮಾತ್ರವಲ್ಲ, ಲಡ್ಡು ವಿಭಾಗ ಸೇರಿ ಮುಖ್ಯದ್ವಾರಗಳಲ್ಲಿ ಸಿಸಿ ಕ್ಯಾಮರಾ ಇದೆ. ನಾನು ಬಂದ ಆರಂಭದಿಂದಲೂ ನನ್ನ ಹೊರಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ.
ನಾನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಜೊತೆ ಚರ್ಚಿಸಿ ಮುಂದಿನ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.