ಹೈದರಾಬಾದ್: ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಮೋಹನ್ ಬಾಬು ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ನಟ ಮೋಹನ್ ಬಾಬು ಪತ್ರಕರ್ತನ ಕ್ಷಮೆಯಾಚಿಸಿದ್ದಾರೆ.
ಗಲಾಟೆ ಪ್ರಕರಣ ಸಂಬಂಧ ವರದಿಗೆ ತೆರಳಿದ್ದ ಖಾಸಗಿ ಸುದ್ದಿವಾಹಿನಿ ವರದಿಗಾರರೊಬ್ಬರ ಮೇಲೆ ನಟ ಮೋಹನ್ ಬಾಬು ಹಲ್ಲೆ ನಡೆಸಿದ್ದರು. ಮೈಕ್ ಕಿತ್ತುಕೊಂಡು ಹೊಡೆದಿದ್ದರು. ವರದಿಗಾರ ರಂಜಿತ್ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ನಟ ಮೋಹನ್ ಬಾಬು ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದೀಗ ನಟ ಮೋಹನ್ ಬಾಬು ಪತ್ರಕರ್ತರ ಕ್ಷಮೆ ಕೋರಿದ್ದಾರೆ. ನಮ್ಮ ಕುಟುಂಬಕ್ಕೆ ಸಂಬಂಧಿಸಿದ ಘಟನೆ ಇಷ್ಟು ದೊಡ್ಡ ವಿಷಯವಾಗಿ ಪತ್ರಕರ್ತರನ್ನು ಸಂಕಷ್ಟಕ್ಕೆ ದೂಡಿದ್ದಕ್ಕೆ ನನಗೆ ವಿಷಾದವಿದೆ. ಘಟನೆಯ ಬಳಿಕ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದ ಕಾರಣ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಾಗಿಲ್ಲ. ಅಂದು ನಡೆದ ಘಟನೆಯಲ್ಲಿ ಪತ್ರಕರ್ತರೊಬ್ಬರು ಗಾಯಗೊಂಡಿರುವುದು ಬೇಸರದ ಸಂಗತಿ. ನಾನು ಅವರ ಕುಟುಂಬಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.
ಮೋಹನ್ ಬಾಬು ಹಾಗೂ ಅವರ ಕಿರಿಯ ಮಗನ ನಡುವೆ ಗಲಾಟೆಗೆ ಸಂಬಂಧಿಸಿದಂತೆ ಜಲಪಲ್ಲಿ ನಿವಾಸಕ್ಕೆ ವರದಿಗೆ ತೆರಳಿದ್ದ ವೇಳೆ ವರದಿಗಾರನ ಮೇಲೆ ಮೋಹನ್ ಬಾಬು ಹಾಗೂ ಅವರ ಹಿರಿಯ ಮಗ ವಿಷ್ಣು ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.