ಬೆಂಗಳೂರು: ಯಶವಂತಪುರ -ಶಿವಮೊಗ್ಗ ಟೌನ್ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲುಗಳಿಗೆ ಚಿಕ್ಕಬಾಣಾವರ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗಿದೆ.
ಡಿಸೆಂಬರ್ 16 ರಿಂದ ಮಾರ್ಚ್ 15ರ ವರೆಗೆ ಮೂರು ತಿಂಗಳ ಕಾಲ ಪ್ರಾಯೋಗಿಕ ಆಧಾರದ ಮೇಲೆ ಚಿಕ್ಕಬಾಣಾವರದಲ್ಲಿ ರೈಲು ನಿಲುಗಡೆಗೆ ನೈರುತ್ಯ ರೈಲ್ವೇ ಅವಕಾಶ ಕಲ್ಪಿಸಿದೆ.
ಯಶವಂತಪುರ -ಶಿವಮೊಗ್ಗ ಟೌನ್ ಡೈಲಿ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಚಿಕ್ಕಬಾಣಾವರ ನಿಲ್ದಾಣಕ್ಕೆ ಬೆಳಿಗ್ಗೆ 9:25ಕ್ಕೆ ಆಗಮಿಸಿ 9:26 ಕ್ಕೆ ನಿರ್ಗಮಿಸಲಿದೆ. ಶಿವಮೊಗ್ಗ ಟೌನ್ -ಯಶವಂತಪುರ ಡೈಲಿ ಇಂಟರ್ಸಿಟಿ ಎಕ್ಸ್ ಪ್ರೆಸ್ ಚಿಕ್ಕಬಾಣಾವರ ನಿಲ್ದಾಣಕ್ಕೆ ಬೆಳಗ್ಗೆ 7.34ಕ್ಕೆ ಆಗಮಿಸಿ 7.35ಕ್ಕೆ ನಿರ್ಗಮಿಸಲಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು -ಜೋಲಾರ್ ಪೇಟೆ ನಿಲ್ದಾಣಗಳ ನಡುವೆ ಸಂಚರಿಸುವ ಮೆಮು ರೈಲುಗಳಿಗೆ ಹೂಡಿ ಹಾಲ್ಟ್ ನಿಲ್ದಾಣದಲ್ಲಿದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು 2025ರ ಮೇ 31 ರವರೆಗೆ ಮುಂದುವರೆಸಲಾಗುವುದು ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ.