ಬೆಳಗಾವಿ: ಡಿಸೆಂಬರ್ 12ರಂದು ರಸ್ತೆ ತಡೆ ನಡೆಸಿ ಹೋರಾಟ ಕೈಗೊಳ್ಳುವಂತೆ ಪಂಚಮಸಾಲಿ ಸಮಾಜದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಮುದಾಯದ ಜನರಿಗೆ ಕರೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ. ಇನ್ನು ಮುಂದೆ ಚೆನ್ನಮ್ಮನಂತೆ ಕ್ರಾಂತಿಯ ಹೋರಾಟ ನಡೆಸುತ್ತೇವೆ. ನಿಮ್ಮ ನಿಮ್ಮ ಊರುಗಳಲ್ಲಿ ರಸ್ತೆ ತಡೆದು ಹೋರಾಟ ನಡೆಸಿ ಎಂದು ಸಮುದಾಯದ ಜನರಿಗೆ ಹೇಳಿದ್ದಾರೆ.
ಇದುವರೆಗೂ ಲಿಂಗಾಯಿತ ವಿರೋಧಿ ಮುಖ್ಯಮಂತ್ರಿ ಎಂದು ಹೇಳುತ್ತಿದ್ದರು. ನಾವು ಹಾಗೆ ಅಂದುಕೊಂಡಿರಲಿಲ್ಲ. ಆದರೆ, ಈಗ ಆ ರೀತಿ ಅನಿಸುತ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಲಿಂಗಾಯಿತ ವಿರೋಧಿ ಎಂದು ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.
ಪಂಚಮಸಾಲಿ ಪ್ರತಿಭಟನೆಯಲ್ಲಿ ಪೊಲೀಸರೇ ಸಿವಿಲ್ ಡ್ರೆಸ್ ಧರಿಸಿ ಬಂದು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಕ್ಷಮೆ ಕೇಳಬೇಕು. ಹಲ್ಲೆ ಮಾಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಅಮಾನತು ಮಾಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.