ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಮ್ಮಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಧ್ಯಪ್ರದೇಶದ ನಜೀರಾಬಾದ್ ಮೂಲದ ಸುನೀತಾ ಬಾಯಿ ಮತ್ತು ಅರ್ಜುನ್ ಸಿಂಗ್ ಅವರ ಪುತ್ರಿಯರಾದ ಸೀಮಾ (6) ಮತ್ತು ರಾಧಿಕಾ (2) ಎಂದು ಗುರುತಿಸಲಾಗಿದೆ. ಅರ್ಜುನ್ ಸಿಂಗ್ ನಜೀರಾಬಾದ್ನಲ್ಲಿ ವಾಸಿಸುತ್ತಿದ್ದರೆ, ಸುನೀತಾ ತನ್ನ ಮಕ್ಕಳನ್ನು ಎಸ್ಟೇಟ್ನಲ್ಲಿ ಕೆಲಸಕ್ಕೆ ಸಹಾಯ ಮಾಡಲು ಕರೆತಂದಿದ್ದರು.
ಸುನೀತಾ ಸಂಜೆ ಕೆಲಸದಿಂದ ಮನೆಗೆ ಹಿಂದಿರುಗಿದಾಗ ತನ್ನ ಮಕ್ಕಳು ಕಾಣೆಯಾಗಿರುವುದು ಗೊತ್ತಾಗಿದೆ, ನಂತರ ಎಲ್ಲಾ ಕಡೆ ಹುಡುಕಾಡಿದ್ದಾರೆ.
ಹತ್ತಿರದ ತೆರೆದ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಿದ ಸ್ಥಳೀಯರು ಈ ಪ್ರದೇಶವನ್ನು ಹುಡುಕಲು ಪ್ರಾರಂಭಿಸಿದರು. ಮನೆಯಿಂದ 100 ಮೀಟರ್ ದೂರದಲ್ಲಿರುವ ಬಾವಿಯಲ್ಲಿ ಸೀಮಾಳ ಶವ ಪತ್ತೆಯಾಗಿದೆ. ಆದರೆ, ಆರಂಭದಲ್ಲಿ ರಾಧಿಕಾ ಶವ ಪತ್ತೆಯಾಗಿರಲಿಲ್ಲ. ಅಗ್ನಿಶಾಮಕ ಮತ್ತು ಪಾರುಗಾಣಿಕಾ ತಂಡಗಳನ್ನು ಘಟನಾ ಸ್ಥಳಕ್ಕೆ ಕರೆಸಲಾಗಿದ್ದು, ಬಾವಿಯನ್ನು ಮತ್ತಷ್ಟು ಶೋಧಿಸಲು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಕೊನೆಗೆ ರಾಧಿಕಾ ಶವ ಪತ್ತೆಯಾಗಿತ್ತು. ಎರಡೂ ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.