ಕಾರವಾರ : ಮುರುಡೇಶ್ವರದಲ್ಲಿ ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲಾಗಿದ್ದು, ಸದ್ಯ ಓರ್ವ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.
ಮೃತಪಟ್ಟಂತಹ ವಿದ್ಯಾರ್ಥಿನಿಯರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದೆ. ವಿದ್ಯಾರ್ಥಿನಿಯರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೆಷ್ವರಕ್ಕೆ ಬಂದಿದ್ದ ವೇಳೆ ನಿನ್ನೆ ಕಡಲ ತೀರದಲ್ಲಿ ಆಟವಾಡುವಾಗ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಲ್ವರು ವಿದ್ಯಾರ್ಥಿನಿಯರು ನೀರುಪಾಲಾಗಿದ್ದರು. ಓರ್ವ ವಿದ್ಯಾರ್ಥಿನಿ ಶ್ರವಂತಿ (15) ಶವವಾಗಿ ಪತ್ತೆಯಾಗಿದ್ದಾಳೆ. ಇನ್ನೂ ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. 15 ವರ್ಷದ ದೀಕ್ಷಾ, ಲಾವಣ್ಯ, ವಂದನಾ ಈ ಮೂವರು ವಿದ್ಯಾರ್ಥಿನಿಯರು ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಪ್ರವಾಸಕ್ಕೆಂದು ತೆರಳಿದ್ದ ವಿದ್ಯಾರ್ಥಿನಿಯರು ನೀರುಪಾಲಾಗಿರುವ ಪ್ರಕರಣ ಸಂಬಂಧ ಇದೀಗ ಮೊರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲೆ ಶಶಿಕಲಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.