ಮಂಡ್ಯ: ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಗೆ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ.
ಎಸ್.ಎಂ.ಕೃಷ್ಣ ಅವರ ಅಂತಿಮ ಯಾತ್ರೆ ಆರಂಭವಾಗಿದ್ದು, ಕೆಲವೇ ಹೊತ್ತಲ್ಲಿ ಪಾರ್ಥಿವ ಶರೀರ ಮದ್ದೂರಿನ ಸೋಮನಹಳ್ಳಿ ತಲುಪಲಿದೆ. ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ಬಗ್ಗೆ ಸುದ್ದಿಗರರೊಂದಿಗೆ ಮಾತನಾಡಿರುವ ಎಸ್.ಎಂ.ಕೃಷ್ಣ ಸಹೋದರನ ಮಗ ಗುರುಚರಣ್, ಕೆಲವೇ ಸಮಯದಲ್ಲಿ ಪಾರ್ಥೀವ ಶರೀರ ಸೋಮನಹಳ್ಳಿ ತಲುಪಲಿದೆ. ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳನ್ನು ನಡೆಸಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದಂತೆ ಸಕಲ ಸರ್ಕಾರಿ ಗೌರವಗಳೊಂದಿದೆ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದರು.
ಎಸ್.ಎಂ.ಕೃಷ್ಣ ನಮ್ಮ ದೊಡ್ಡಪ್ಪ. ದೊಡ್ಡಪ್ಪನ ಅಗಲಿಕೆ ತೀವ್ರ ದು:ಖತಂದಿದೆ. ನಾವು ತಂದೆ-ಮಗನಂತೆ ಇದ್ದೆವು. ಎಸ್.ಎಂ.ಕೃಷ್ಣ ರಾಜ್ಯ ಮಾತ್ರವಲ್ಲ ಇಡೀ ರಾಷ್ಟ್ರ ಕಂಡ ಮುತ್ಸದ್ದಿ ರಾಜಕಾರಣಿ. ಅಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ನಿಜಕ್ಕೂ ಭರಿಸಲಾಗದ ನಷ್ಟ. ನೋವುಂಟು ಮಾಡಿದೆ ಎಂದು ತಿಳಿಸಿದರು.