ಬೆಳಗಾವಿ : ಪಂಚಮಸಾಲಿ ಮೀಸಲಾತಿ ಸಮುದಾಯದವರು 2 ಎ ಮೀಸಲಾತಿಗೆ ಆಗ್ರಹಿಸಿ ನಿನ್ನೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದರು. ನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಲುಪಿತ್ತು, ಘಟನೆ ಸಂಬಂಧ ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಕಲ್ಲು ತೂರಾಟ ನಡೆಸಿದ ನಿಂಗಪ್ಪ ಬಣದ್, ರಾಮಗೌಡ ಫಕೀರಗೌಡ, ಉಮೇಶ್ ಇಂಗಳೆವಾರ್, ಮಂಜುನಾಥ್ ಬೆಂಡಿಗೇಡಿ, ಮಂಜುನಾಥ್ ಗುಮ್ಮಗೋಳ ಹಾಗೂ ಇತರರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟ ನಿನ್ನೆ ತೀವ್ರಗೊಂಡಿದ್ದು, ಸುವರ್ಣಸೌಧಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. 2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದವರು ಹೋರಾಟ ನಡೆಸುತ್ತಿದ್ದು, ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಹಿನ್ನೆಲೆ ಕಾನೂನು ಸುವ್ಗವಸ್ಥೆ ಎಡಿಜಿಪಿ ಹಿತೇಂದ್ರ ಮತ್ತು ಪೊಲೀಸ್ ಸಿಬ್ಬಂದಿಗಳು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ.
ಲಾಠಿ ಏಟಿಗೆ 20ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾಠಿ ಚಾರ್ಜ್ ಮಾಡುತ್ತಿದ್ದಂತೆ ಪ್ರತಿಭಟನಾಕಾರರ ಆಕ್ರೋಶ ಮತ್ತಷ್ಟು ಹೆಚ್ಚಿದ್ದು, ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಎಂಎಲ್ ಸಿ ಯೊಬ್ಬರಿಗೆಸೇರಿದ ಕಾರು, ಪೊಲೀಸ್ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಲಾಗಿದ್ದು, ವಾಹನಗಳ ಗಾಜು ಪುಡಿಪುಡಿಯಾಗಿತ್ತು.