ರಾಯಚೂರು: ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಬೆನ್ನಲ್ಲೇ ಬೆಳಗಾವಿಯಲ್ಲಿಯೂ ಬಾಣಂತಿಯರು ಹಾಗೂ ಶಿಶುಗಳ ಮಾರಣ ಹೋಮದ ಬಗ್ಗೆ ವರದಿಯಾಗಿತ್ತು. ಇದೀಗ ರಾಯಚೂರಿನಲ್ಲಿಯೂ ಬಾಣಂತಿಯರ ಸರಣಿ ಸಾವಾಗಿರುವ ಬಗ್ಗೆ ವರದಿಯಾಗಿದೆ.
ರಾಯಚೂರಿನಲ್ಲಿ ಒಂದೇ ತಿಂಗಳಲ್ಲಿ ನಾಲ್ವರು ಬಾನಂತಿಯರು ಮೃತಪಟ್ಟಿದ್ದಾರೆ. ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.
ಮೃತ ಬಾಣಂತಿಯರನ್ನು ಚಂದ್ರಕಲಾ (26), ರೇಣುಕಮ್ಮ (32), ಮೌಸಮಿ ಮಂಡಲ್ (22) ಹಾಗೂ ಚನ್ನಮ್ಮ ಎಂದು ಗುರುತಿಸಲಾಗಿದೆ.
ತಾಲೂಕು ಆಸ್ಪತ್ರೆಯಲ್ಲಿ ಅಕ್ಟೋಬರ್ ನಲ್ಲಿ ನಡೆದ 300 ಹೆರಿಗೆಯಲಿ 7 ಜನರ ಸ್ಥಿತಿ ಗಂಭೀರವಾಗಿತ್ತು. ಆ ಪೈಕಿ 4 ಜನರು ಸಾವನ್ನಪ್ಪಿದ್ದಾರೆ. ಅ.21ರಂದು ಚನ್ನಮ್ಮ ಅವರಿಗೆ ಸಿಜೇರಿಯನ್ ಮೂಲಕ ಹೆರಿಗೆಯಾಗಿತ್ತು. ಅದಾದ 9 ದಿನಗಳ ಬಳಿಕ ಸಾವನ್ನಪ್ಪಿದ್ದರು. ಮೌಸಮಿ ಹೆರಿಗೆಯಾದ ಮಾರನೆ ದಿನ ಹಾಗೂ ರೇಣುಕಮ್ಮ ಹೆರಿಗೆಯಾದ ಮಾರನೇ ದಿನವೇ ಮೃತಪಟ್ಟಿದ್ದರು. ನಾಲ್ವರಿಗೂ ಸಿಜೇರಿಯನ್ ಆಗಿತ್ತು ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಬೇರೆ ಬೇರೆ ವೈದ್ಯಕೀಯ ಕಾರಣದಿಂದಾಗಿ ಬಾಣಂತಿಯರ ಸಾವಿಗೆ ಎಂದು ತಿಳಿಸಿದ್ದಾರೆ.