alex Certify 1-19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡಿ ; ಆರೋಗ್ಯ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1-19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡಿ ; ಆರೋಗ್ಯ ಇಲಾಖೆ

ಶಿವಮೊಗ್ಗ : ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ಜಂತುಹುಳು ಕುಂಠಿತಗೊಳಿಸುತ್ತಿದ್ದು ಜಿಲ್ಲೆಯಲ್ಲಿ 1 ವರ್ಷದಿಂದ 19 ವರ್ಷದ ಎಲ್ಲ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆ ತೆಗೆದುಕೊಳ್ಳುವ ಮೂಲಕ ಜಂತು ಹುಳು ನಿವಾರಣೆಗೆ ಸಹಕರಿಸಬೇಕು ಎಂದು ಡಿಹೆಚ್ಒ ಡಾ.ನಟರಾಜ್.ಕೆ.ಎಸ್, ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ
ಆರೋಗ್ಯ ಅಭಿಯಾನ, ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ. ಪದವಿಪೂರ್ವ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ರೋಟರಿ ಪೂರ್ವ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ರೋಟರಿ ಪೂರ್ವ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳೆಲ್ಲ ಇಂದು ಜಂತುಹುಳು ನಿವಾರಣಾ ಮಾತ್ರೆ ಆಲ್ಬೆಂಡಜೋಲ್ನ್ನು ಶಿಕ್ಷಕರಿಂದ ಪಡೆದು, ಜಗಿದು ನುಂಗಬೇಕು. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ(ಪುಡಿ ಮಾಡಿ) ಮತ್ತು 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆಯನ್ನು ಜಗಿದು ನುಂಗಲು ಶಿಕ್ಷಕರು ನೀಡಬೇಕು.

ಈ ಹಿಂದೆ ಜಂತು ಹುಳು ಮಾತ್ರೆಯನ್ನು ತೆಗೆದುಕೊಂಡಿದ್ದರೂ ಸಹ ಪಲ್ಸ್ ಪೋಲಿಯೋ ಮಾದರಿಯಲ್ಲಿ ಇಂದು ಎಲ್ಲ ಮಕ್ಕಳು ಮಾತ್ರೆಯನ್ನು ತಗೆದುಕೊಳ್ಳಬೇಕು. ಮಾತ್ರೆಯನ್ನು ಜಗಿದು ನುಂಗಬೇಕು. ಜಂತು ಹುಳು ಸೋಂಕಿನಿಂದ ಮಕ್ಕಳಲ್ಲಿ ರಕ್ತಹೀನತೆ, ಪೌಷ್ಟಿಕಾಂಶ ಕೊರತೆ, ಹಸಿವಾಗದಿರುವುದು, ವಾಂತಿ, ನಿಶಕ್ತಿ, ಅತಿಸಾರ, ಓದಿನಲ್ಲಿ ಏಕಾಗ್ರತೆ ಕೊರತೆ ಮುಂತಾದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಮಕ್ಕಳು ಆರು ತಿಂಗಳಿಗೊಮ್ಮೆ ಜಂತು ಹುಳು ಮಾತ್ರೆ ತೆಗೆದುಕೊಳ್ಳಬೇಕು. ಜೊತೆಗೆ ಸೋಂಕು ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಹಾರ ತೆಗೆದುಕೊಳ್ಳುವ ಮುನ್ನ ಸೋಪಚ್ಚಿ ಕೈಗಳನ್ನು ತೊಳೆದುಕೊಳ್ಳಬೇಕು.

ಸ್ವಚ್ಚತೆ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ರೋಟರಿ ಪೂರ್ವ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟ್ ಚಂದ್ರಶೇಖರಯ್ಯ ಎಂ ಮಾತನಾಡಿ, ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸುಧಾರಣೆಯಾದಲ್ಲಿ ಅಭಿವೃದ್ದಿ ಸಾಧ್ಯವಾಗುತ್ತದೆ. ಜಂತು ಹುಳುಗಳು ಪರಾವಲಂಬಿ ಜೀವಿಯಾಗಿದ್ದು ಇವು ಮೂಲ ಜೀವವನ್ನು ಬೆಳೆಯಲು ಬಿಡುವುದಿಲ್ಲ. ಆದ್ದರಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಬಯಲು ಶೌಚ ನಿಲ್ಲಿಸಬೇಕು. ಯಾಕೆಂದರೆ ಕಾಲಿನ ಮೂಲಕ, ತರಕಾರಿ, ಗಾಳಿ ಮೂಲಕ ಜಂತು ದೇಹ ಪ್ರವೇಶಿಸಿ ನಮ್ಮ ದೇಹದ ಪೌಷ್ಟಿಕಾಂಶವನ್ನೆಲ್ಲ ಹೀರಿಕೊಂಡು ಬೆಳೆಯುತ್ತಾ ನಮಗೆ ರಕ್ತಹೀನತೆ ಉಂಟು ಮಾಡುತ್ತದೆ. ಆದ್ದರಿಂದ ಸ್ವಚ್ಚತೆಯನ್ನು ಕಾಪಾಡುವುದು ಬಹು ಮುಖ್ಯ ಶುಚಿತ್ವ ದೈವತ್ವಕ್ಕೆ ಸಮಾನವೆಂದು ನಡೆಯಬೇಕು. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಮಹಿಳೆಯರಲ್ಲಿ ರಕ್ತಹೀನತೆ ಪ್ರಮಾಣ ಹೆಚ್ಚಿದ್ದು, ಮಹಿಳೆ ಸುಶಿಕ್ಷಿತರಾಗಿ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಕ್ಕಳಲ್ಲಿ ಮನೆಯಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕೆಂದರು.

ಆರ್ಸಿಹೆಚ್ ಅಧಿಕಾರಿ ಡಾ.ಓ.ಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 470316 ಮಕ್ಕಳು ನೋಂದಣಿಯಾಗಿದ್ದು, ಇಂದು ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರ, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡುವ ಮೂಲಕ ಮಾತ್ರೆ ನೀಡಲಾಗುವುದು. ಇಂದು ಬಿಟ್ಟು ಹೋದ ಮಕ್ಕಳಿಗೆ ದಿ: 16-12-2024 ರಂದು ಮಾಪ್-ಅಪ್-ರೌಂಡ್ನಲ್ಲಿ ಮಾತ್ರೆ ನೀಡಿ ಶೇ.100 ಗುರಿ ಸಾಧನೆ ಮಾಡಲಾಗುವುದು.

ವಿಶ್ವದಲ್ಲಿ 150 ಕೋಟಿ, ಭಾರತದಲ್ಲಿ 61 ಕೋಟಿಗೂ ಹೆಚ್ಚು ಜನ ಜಂತು ಹುಳು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಂತು ಹುಳು ನಮ್ಮಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಕುಂಠತವಾಗಲು ಕಾರಣವಾಗುತ್ತದೆ. ಆದ್ದರಿಂದ ಇದರ ನಿವಾರಣೆ ಅತಿ ಅಗತ್ಯವಾಗಿದೆ. ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡುವಲ್ಲಿಯೂ ಜಂತು ಹುಳು ನಿವಾರಣೆ ಕಾರ್ಯಕ್ರಮ ಪೂರಕವಾಗಿದೆ. 2015 ರಲ್ಲಿ ರಾಜ್ಯದಲ್ಲಿ ನಡೆದ ಸಮೀಕ್ಷೆ ಯೊಂದರ ಪ್ರಕಾರ 19 ವರ್ಷದೊಳಗಿನ ಶೇ. 49 ಮಕ್ಕಳು ಜಂತುಹುಳಿವಿನಿAದ ರಕ್ತಹೀನತೆಯಿಂದ ಬಳಲುತ್ತಿದ್ದರು. 2015 ರಿಂದ ಪ್ರತಿ ವರ್ಷ ಎರಡು ಬಾರಿ ಜಂತುಹುಳು ನಿವಾರಣಾ ಹುಳು ಮಾತ್ರೆ ನೀಡುತ್ತಾ ಬಂದಿದ್ದು, ಸೋಂಕಿನ ಪ್ರಮಾಣ ಶೇ.022 ಗೆ ಇಳಿಸಲಾಗಿದೆ. ಜಂತು ಹುಳು ಆಗದಂತೆ ಮುಂಜಾಗ್ರತೆ ವಹಿಸಬೇಕು. ಊಟಕ್ಕೂ ಮುನ್ನ ಸೋಪು ಹಚ್ಚಿ ಕೈಗಳನ್ನು ಸ್ವಚ್ವ ಮಾಡಿಕೊಳ್ಳಬೇಕು. ಉಗುರು ಕಟ್ ಮಾಡಿಕೊಳ್ಳಬೇಕು, ಬಯಲು ಮಲ ವಿಸರ್ಜನೆ ನಿಲ್ಲಿಸಿ ಕಡ್ಡಾಯವಾಗಿ ಶೌಚಾಲಯ ಬಳಸಬೇಕು. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...