ತುಮಕೂರು: ಪಿಡಿಒ ನೇಮಕಾತಿ ಪರೀಕ್ಷೆ ವೇಳೆ ಅಕ್ರಮ ಎಸಗಿದ ಅಭ್ಯರ್ಥಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತುಮಕೂರಿನ ವಿದ್ಯೋದಯ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಸಾಧನ ಬಳಸಿ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಯನ್ನು ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಭಾನುವಾರ ಪರೀಕ್ಷೆ ನಡೆಯುತ್ತಿದ್ದ ವೇಳೆ ಅಭ್ಯರ್ಥಿ ಬ್ಲೂಟೂತ್ ಸಾಧನ ಬಳಸಿ ಅಕ್ರಮ ಮಾಡುತ್ತಿರುವುದನ್ನು ಸಿಸಿ ಕ್ಯಾಮೆರಾ ಕಂಟ್ರೋಲ್ ರೂಂನಲ್ಲಿ ಕುಳಿತು ವೀಕ್ಷಿಸುತ್ತಿದ್ದ ಸಿಬ್ಬಂದಿ ಗಮನಿಸಿದ್ದಾರೆ. ಕೂಡಲೇ ಪರೀಕ್ಷಾ ಕೊಠಡಿಗೆ ತೆರಳಿ ಆತನನ್ನು ವಿಚಾರಿಸಲು ಮುಂದಾದಾಗ ನೆಪ ಹೇಳಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಆತನನ್ನು ಹಿಡಿದುಕೊಂಡ ಸಿಬ್ಬಂದಿ ಭದ್ರತೆಗೆ ನಿಯೋಜಿಸಿದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಭ್ಯರ್ಥಿ ಬೆಂಗಳೂರು ರಾಮಮೂರ್ತಿ ನಗರದ ಧರ್ಮೇಂದ್ರ(33) ಎನ್ನಲಾಗಿದ್ದು, ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.