ಬೆಂಗಳೂರು: ಮುಂದಿನ 10 ದಿನಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಎರಡು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಇದರಿಂದಾಗಿ ರಾಜ್ಯದಲ್ಲಿ ಡಿಸೆಂಬರ್ 14 ರಿಂದ 18 ರವರೆಗೆ ಮಳೆಯಾಗುವ ಸಂಭವವಿದೆ.
ಫೆಂಗಲ್ ಚಂಡಮಾರುತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆರಡು ವಾಯುಭಾರ ಕುಸಿತ ಸೃಷ್ಟಿಯಾಗುವ ಲಕ್ಷಣಗಳು ಬಂಗಾಳಕೊಲ್ಲಿಯಲ್ಲಿ ಕಂಡುಬರುತ್ತಿವೆ. ಮೊದಲ ವಾಯು ಭಾರ ಕುಸಿತ ಒಂದೆರಡು ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಡಿಸೆಂಬರ್ 14 ರಿಂದ 15 ರವರೆಗೆ ಮಳೆಯಾಗುವ ಸಂಭವವಿದೆ.
ಎರಡನೇ ವಾಯುಭಾರ ಕುಸಿತ ಡಿಸೆಂಬರ್ 16ರ ನಂತರ ರೂಪುಗೊಳ್ಳಲಿದ್ದು, ರಾಜ್ಯದಲ್ಲಿ ಡಿಸೆಂಬರ್ 17, 18ರ ವೇಳೆಗೆ ಮಳೆಯಾಗುವ ಸಂಭವ ಇದೆ. ಸದ್ಯ ಬಹುತೇಕ ಭಾಗಗಳಲ್ಲಿ ಬೆಳೆಗಳು ಕಟಾವಿಗೆ ಬಂದಿದ್ದು, ರೈತರು ಕೊಯ್ಲು ಕಾರ್ಯದಲ್ಲಿ ನಿರತಾಗಿದ್ದಾರೆ. ಈಗಾಗಲೇ ಫೆಂಗಲ್ ಚಂಡಮಾರುತದಿಂದ ಬೆಳೆ ಹಾಳಾಗಿದ್ದು, ಮತ್ತೆ ಮಳೆಯಾದರೆ ರೈತರಿಗೆ ಭಾರಿ ತೊಂದರೆಯಾಗಲಿದೆ.