ಮುಂಬೈ: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದ ಅದ್ಧೂರಿ ಸಮಾರಂಭದಲ್ಲಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಪ್ರಮಾಣ ವಚನ ಬೋಧಿಸಿದರು.
ಮೂರನೇ ಬಾರಿಗೆ ಸಿಎಂ ಸ್ಥಾನ ಅಲಂಕರಿಸಿದ ಫಡ್ನವೀಸ್ ಇಬ್ಬರು ಉಪಮುಖ್ಯಮಂತ್ರಿಗಳೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಅಜಿತ್ ಪವಾರ್ ಮತ್ತು ಶಿವಸೇನೆ ಅಧ್ಯಕ್ಷ ಏಕನಾಥ್ ಶಿಂಧೆ ಕೂಡ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಕೇಂದ್ರ ಸಚಿವರು, ಎನ್.ಡಿ.ಎ. ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಿದ್ದರು.
ನವೆಂಬರ್ 20 ರ ರಾಜ್ಯ ವಿಧಾನಸಭಾ ಚುನಾವಣೆ ಮತ್ತು ನವೆಂಬರ್ 23 ರಂದು ಫಲಿತಾಂಶದ ನಂತರ ಎರಡು ವಾರಗಳ ತೀವ್ರ ಮಾತುಕತೆಗಳ ನಂತರ ಹೊಸ ಸರ್ಕಾರ ರಚನೆಯಾಗಿದೆ. ನಾಗ್ಪುರ ನೈಋತ್ಯ ಕ್ಷೇತ್ರವನ್ನು ಪ್ರತಿನಿಧಿಸುವ 54 ವರ್ಷದ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿದ್ದಾರೆ.
288 ಸದಸ್ಯ ಬಲದ ಸದನದಲ್ಲಿ 132 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿಯೊಂದಿಗೆ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟವು 230 ಸ್ಥಾನಗಳ ಬಹುಮತವನ್ನು ಹೊಂದಿದೆ.