ಬಾಂಗ್ಲಾದೇಶದ ವ್ಯಕ್ತಿಯೊಬ್ಬ ಪಶ್ಚಿಮ ಬಂಗಾಳದ ಪೆಟ್ರಾಪೋಲ್ ಬಳಿ ಭಾರತ-ಬಾಂಗ್ಲಾದೇಶ ಗಡಿಯನ್ನು ಅಕ್ರಮವಾಗಿ ದಾಟಲು ಮಧ್ಯವರ್ತಿಗಳಿಗೆ 12,000 ರೂ. ಪಾವತಿಸಿರುವ ಕುರಿತಂತೆ ತಪ್ಪೊಪ್ಪಿಕೊಂಡಿರುವುದನ್ನು ಇಂಡಿಯಾ ಟುಡೇ ತಂಡ ಕ್ಯಾಮೆರಾದಲ್ಲಿ ಸೆರೆಹಿಡಿದಿದೆ. ಬಾಂಗ್ಲಾದೇಶದ ಮಹೇಶ್‌ಪುರದ ನಿವಾಸಿ ಸೈಫುಲ್ ಇಸ್ಲಾಂ ಇಂಡಿಯಾ ಟುಡೇಗೆ ಈ ವಿಷಯ ತಿಳಿಸಿದ್ದು, ಎರಡೂ ಕಡೆಯಲ್ಲೂ ಭದ್ರತಾ ಪಡೆಗಳ ಕಣ್ತಪ್ಪಿಸಿ ನದಿಯನ್ನು ದಾಟಿ ಬಂದಿದ್ದಾನೆ.
ಬಾಂಗ್ಲಾದೇಶದಲ್ಲಿನ ಹಣಕಾಸಿನ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಅಲ್ಲಿನ ದುಡಿಮೆಯಿಂದ ನಮಗೆ ಬದುಕಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ನಾನು ಸಾಲ ಮಾಡಿಕೊಂಡಿದ್ದು, ಹೀಗಾಗಿ ದುಡಿಮೆಯ ಉದ್ದೇಶದಿಂದ ಮಧ್ಯವರ್ತಿಗೆ 12 ಸಾವಿರ ರೂ. ಗಳನ್ನು ಪಾವತಿಸಿ ಅಕ್ರಮ ಮಾರ್ಗದ ಮೂಲಕ ಭಾರತಕ್ಕೆ ಬಂದಿರುವ ವಿಷಯವನ್ನು ತಿಳಿಸಿದ್ದಾನೆ.
“ಬಾಂಗ್ಲಾದೇಶದಲ್ಲಿ ನಾನು ಸಾಲದ ಸುಳಿಯಲ್ಲಿ ಸಿಲುಕಿದ್ದೆ. ಡ್ರ್ಯಾಗನ್ ಫ್ರೂಟ್ ಬೇಸಾಯ ಮಾಡಲು ಮತ್ತು ಇತರ ಕೆಲಸಗಳನ್ನು ಮಾಡುವಂತೆ ನನ್ನ ತಂದೆ ಹೇಳಿದ್ದರು, ಆದರೆ ಆ ಕೆಲಸದಿಂದ ಸಾಲವನ್ನು ತೀರಿಸಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಭಾರತಕ್ಕೆ ಬಂದಿದ್ದೇನೆ” ಎಂದು ಹೇಳಿದ್ದಾನೆ.
“ಪೊಲೀಸರು ನನ್ನನ್ನು ಬಂಧಿಸಿದರೆ, ನಾನು ಆರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸುತ್ತೇನೆ, ನಂತರ ಅವರು ನನ್ನನ್ನು ಬಾಂಗ್ಲಾದೇಶಕ್ಕೆ ಕಳುಹಿಸುತ್ತಾರೆ, ಕನಿಷ್ಠ ನನ್ನ ತಾಯಿಯನ್ನು ಮತ್ತೆ ನೋಡುತ್ತೇನೆ” ಎಂದು ಭಂಡತನದ ಪ್ರತಿಕ್ರಿಯೆ ನೀಡಿದ್ದಾನೆ.
ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ನೀಲೋತ್‌ಪಾಲ್ ಕುಮಾರ್ ಪಾಂಡೆ, ಒಳನುಸುಳುವಿಕೆ ವಿರುದ್ಧ ಕಟ್ಟುನಿಟ್ಟಿನ ನಿಗ್ರಹವನ್ನು ಪ್ರಾರಂಭಿಸಲಾಗಿದ್ದರೂ, ಗಮನಾರ್ಹ ಸವಾಲುಗಳು ಇನ್ನೂ ಉಳಿದಿವೆ ಎಂದರಲ್ಲದೇ ಹೆಚ್ಚಿನ ತನಿಖೆಯಿಲ್ಲದೆ ಈ ನಿರ್ದಿಷ್ಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.