ಬೆಂಗಳೂರು: ಹೊಸದಾಗಿ ಅರಣ್ಯ ಒತ್ತುವರಿಯಾಗುವುದನ್ನು ತಡೆಯಲು ಉಪಗ್ರಹ ಕಣ್ಗಾವಲು ವ್ಯವಸ್ಥೆ, ಅರಣ್ಯ ಹೊದಿಕೆ ಬದಲಾವಣೆ ಮುನ್ನೆಚ್ಚರಿಕೆ ವ್ಯವಸ್ಥೆ ಸಮರ್ಪಕವಾಗಿ ಬಳಸಿಕೊಂಡು ಒತ್ತುವರಿ ತಡೆ ಹಾಗೂ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದ ಭಗೋಳಿಕ ವಿಸ್ತೀರ್ಣಕ್ಕೆ ಶೇಕಡ 33 ರಷ್ಟು ಹಸಿರು ಹೊದಿಕೆ ಇರಬೇಕಿತ್ತು, ಆದರೆ, ರಾಜ್ಯದಲ್ಲಿ ಶೇಕಡ 22ರಷ್ಟು ಹಸಿರು ಹೊದಿಕೆ ಇದೆ. ಸದ್ಯ ಇರುವ ಅರಣ್ಯವನ್ನು ಒತ್ತುವರಿ ಮಾಡಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದ್ದಾರೆ.
ಅಕ್ಷಾಂಶ, ರೇಖಾಂಶ ಆಧಾರಿತ ಜಿಯೋ ರೆಫರೆನ್ಸ್ ಮೂಲಕ ಗುರುತಿಸಲಾಗಿರುವ ಅರಣ್ಯ ಗಡಿ ಒಳಗೆ ಯಾವುದೇ ಒತ್ತುವರಿಯಾಗದಂತೆ ತಡೆಯಲು ರಾಜ್ಯ ದೂರ ಸಂವೇದಿ ಅನ್ವಯಕ ಕೇಂದ್ರ ಸಹಯೋಗದಲ್ಲಿ ಸಿದ್ದಪಡಿಸಿರುವ ಅರಣ್ಯ ಹೊದಿಕೆ ಬದಲಾವಣೆ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಸಮರ್ಥಕವಾಗಿ ಬಳಸಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
2015ರ ಪೂರ್ವದಲ್ಲಿ ಜೀವನೋಪಾಯಕ್ಕೆ 3 ಎಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿರುವ ಹಾಗೂ ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಬಾಕಿ ಇರುವ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಅರಣ್ಯ ಒತ್ತುವರಿ ತೆರವಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.