ದಾವಣಗೆರೆ: ಅಪ್ರಾಪ್ತನಿಗೆ ಚಾಲನೆ ಮಾಡಲು ಕಾರ್ ನೀಡಿದ ವ್ಯಕ್ತಿಗೆ ಎ.ಎಸ್.ಸಿ.ಎಸ್. ಜೆ.ಎಂ.ಎಫ್.ಸಿ. ನ್ಯಾಯಾಲಯ 27 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಕೆಲವು ತಿಂಗಳ ಹಿಂದೆ ಸಂಚಾರ ಠಾಣೆ ಪೋಲೀಸರು ವಾಹನಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ಕಾರ್ ನಿಲ್ಲಿಸಿ ತಪಾಸಣೆಗೆ ಒಳಪಡಿಸಿದಾಗ ಚಾಲಕ ಅಪ್ರಾಪ್ತನಾಗಿರುವುದು ಗೊತ್ತಾಗಿದೆ. ಬಾಲಕ ಮತ್ತು ದಾವಣಗೆರೆ ನಿವಾಸಿ ಮಂಜುನಾಥ್ ಎಂಬುವರ ವಿರುದ್ಧ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸಂಚಾರ ವೃತ್ತ ನಿರೀಕ್ಷಕ ನೆಲವಾಗಲು ಮಂಜುನಾಥ್ ನೇತೃತ್ವದಲ್ಲಿ ಪ್ರಕರಣ ತನಿಖೆ ನಡೆಸಿದ ಪಿಎಸ್ಐ ಶೈಲಜಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಾಗೇಶ್ ಅವರು ಬಾಲಕನಿಗೆ ಕಾರ್ ನೀಡಿದ ಮಂಜುನಾಥ್ ಗೆ 27 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.