ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟು ಗ್ರಾಹಕರ ಮನಗೆದ್ದಿದ್ದ ಕೆಎಂಎಫ್ ನಂದಿನಿ ಹಾಲಿಗೆ ತಡೆ ಹಾಕಲಾಗುತ್ತಿದೆ. ನಂದಿನಿ ಹಾಲಿನ ವಹಿವಾಟಿಗೆ ಉತ್ತರ ಭಾರತದ ಪ್ರಮುಖ ಹಾಲಿನ ಬ್ರ್ಯಾಂಡ್ ಗಳು ಅಡ್ಡಗಾಲು ಹಾಕುತ್ತಿವೆ. ನಂದಿನಿ ಹಾಲು ದೆಹಲಿ ಗ್ರಾಹಕರ ಕೈ ಸೇರದಂತೆ ವ್ಯವಸ್ಥಿತ ಪಿತೂರಿ ನಡೆಸಿವೆ.
ಕೆಎಂಎಫ್ ನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಉತ್ತರ ಭಾರತದ ಹಾಲು ಒಕ್ಕೂಟಗಳು ವಹಿವಾಟು ಕುಸಿತದ ಭೀತಿ ಎದುರಿಸುತ್ತಿದ್ದು, ನಂದಿನಿ ಹಾಲು ದೆಹಲಿ ಗ್ರಾಹಕರ ಕೈ ಸೇರದಂತೆ ಪ್ರತಿದಿನ ತಾವೇ ಸ್ಥಳೀಯ ಡೀಲರ್ ಗಳಿಂದ ನಂದಿನಿ ಹಾಲು ಖರೀದಿಸಿ ರಸ್ತೆಗೆ ಚೆಲ್ಲುತ್ತಿವೆ. ಪ್ರತಿಷ್ಠಿತ ಹಾಲು ಬ್ರ್ಯಾಂಡ್ ಒಕ್ಕೂಟವೊಂದು ಇದಕ್ಕಾಗಿಯೇ 300ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದೆ. ಅವರಿಂದ ಹಾಲು ಖರೀದಿಸಿ ಚೆಲ್ಲುತ್ತಿದ್ದು, ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ಹೇಳಲಾಗಿದೆ.
ದೇಶದ ಹೈನುಗಾರಿಕೆ ಉದ್ಯಮದಲ್ಲಿ ಎರಡನೇ ಸ್ಥಾನದಲ್ಲಿರುವ ಕೆಎಂಎಫ್ ವಿದೇಶಕ್ಕೂ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿದ ಉತ್ತರ ಭಾರತದ ಹಾಲು ಒಕ್ಕೂಟಗಳು ದೆಹಲಿಯಲ್ಲಿ ಕರ್ನಾಟಕದ ನಂದಿನಿ ಹಾಲಿನ ವಹಿವಾಟಿಗೆ ಸಮಸ್ಯೆ ಉಂಟುಮಾಡುತ್ತಿವೆ.
ತಾವೇ ನಂದಿನಿ ಹಾಲನ್ನು ಖರೀದಿಸಿ ಕೃತಕ ಅಭಾವ ಸೃಷ್ಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧಿಕಾರಿಗಳ ತಂಡ ದೆಹಲಿಗೆ ತೆರಳಿ ಮಾರುಕಟ್ಟೆ ಉತ್ತೇಜನಕ್ಕೆ ಅಲ್ಲೇ ಬೀಡು ಬಿಟ್ಟಿದ್ದಾರೆ. ಸ್ಥಳೀಯ ಡೀಲರ್ ಗಳನ್ನು ಭೇಟಿಯಾಗಿ ನಂದಿನಿ ಹಾಲಿನ ವಹಿವಾಟಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ದಿನದಿಂದ ದಿನಕ್ಕೆ ದೆಹಲಿ ಗ್ರಾಹಕರ ಮೆಚ್ಚುಗೆ ಗಳಿಸುತ್ತಿರುವ ನಂದಿನಿ ಹಾಲಿನ ಮಾರಾಟ ವೃದ್ಧಿಸುತ್ತಿದೆ. ಇದನ್ನು ಸಹಿಸದೆ ತೆರೆಮರೆಯಲ್ಲಿ ಅಡ್ಡಿಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.