ಬೆಂಗಳೂರು : ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಏನಿದೆ ಆದೇಶದಲ್ಲಿ..?
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿಗೆ ಮಾನ್ಯತೆ ನವೀಕರಣ ಪಡೆಯಲು ಖಾಸಗಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾನ್ಯತೆ ಕೋರಿ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಉಲ್ಲೇಖ(6) ಮತ್ತು (7) ಅವಕಾಶ ನೀಡಿ ಸುತ್ತೋಲೆ ನೀಡಲಾಗಿತ್ತು ಆದಾಗ್ಯೂ ಕೆಲವು ಶಾಲೆಗಳು 2023-24ನೇ ಸಾಲಿನಲ್ಲಿ ನೀಡಿದ ಕಾಲಾವಧಿಯಲ್ಲಿ ಮಾನ್ಯತೆ ಪಡೆಯಲು ವಿಫಲರಾಗಿದ್ದು, ಅವಕಾಶ ಕೋರಿದ ಹಿನ್ನೆಲೆಯಲ್ಲಿ ಅಂತಹ ಶಾಲೆಗಳಿಗೆ ಉಲ್ಲೇಖ(ಕಿ) ರ ಸರ್ಕಾರದ ಪತ್ರದಂತೆ 2023. 24ನೇ ಸಾಲಿಗೆ ಮಾನ್ಯತೆ/ಮಾನ್ಯತೆ ನವೀಕರಣ ಪಡೆಯಲು ಖಾಸಗಿ ಅನುದಾನಿತ/ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮುಂದಿನ ವರ್ಷಗಳಲ್ಲಿ ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಮಾನ್ನತೆ ನವೀಕರಣ ಮಾಡಿಕೊಳ್ಳುವ ಮತ್ತು ಆ ರೀತಿ ಮಾನ್ಯತೆ ನವೀಕರಣ ಮಾಡಿಕೊಳ್ಳಲು ವಿಫಲವಾಗುವ ಶಾಲೆಗಳ ನೋಂದಣಿ ರದ್ದು ಪಡಿಸುವ ಮತ್ತು ಮಾನ್ಯತೆಯನ್ನು ಹಿಂಪಡೆಯುವ ಷರತ್ತಿಗೊಳಪಡಿಸಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಒಂದು ಬಾರಿಗೆ ಮಾತ್ರ 2023-24 ನೇ ಸಾಲಿನ ಮಾನ್ಯತೆ ನವೀಕರಣಕ್ಕೆ ಮಾತ್ರ ಅವಕಾಶ ನೀಡಲು ಸರ್ಕಾರವು ಅನುಮತಿ ನೀಡಿರುತ್ತಾರೆ.
ಮಾನ್ಯತೆ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಿ ಮಾನ್ಯತೆ ಪಡೆಯುವುದು ಕಡ್ಡಾಯವಾಗಿರುತ್ತದೆ, ಯಾವುದೇ ಶಾಲೆಯು ಮಾನ್ಯತೆ ಪಡೆಯದೇ ನಡೆಯುತ್ತಿದ್ದಲ್ಲಿ ಅಂತಹ ಶಾಲೆಯ ವಿರುದ್ಧ ನಿಯಮಾನುಸಾರ ಕ್ರಮ ವಹಿಸುವುದು ಸಕ್ಷಮ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ. ಉಳಿದಂತೆ ಉಲ್ಲೇಖ(1) ರಿಂದ (7)ರ ಎಲ್ಲಾ ಅಧಿಸೂಚನೆ/ಸುತ್ತೋಲೆಗಳ ಎಲ್ಲಾ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ.
ಮುಂದುವರೆದು, 2023-24ನೇ ಸಾಲಿನಲ್ಲಿ ಮಾನ್ಯತೆ ನವೀಕರಣ ಪಡೆಯದ ಖಾಸಗಿ ಶಾಲೆಗಳು ಪ್ರಸ್ತುತ 2023-24ನೇ ಸಾಲಿಗೆ ಮಾನ್ಯತೆ ನವೀಕರಣ ಪಡೆಯುವ ಸಂಬಂಧ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅಂತಹ ಶಾಲೆಗಳಿಗೆ ಎಲ್ಲಾ ಮಾನದಂಡಗಳನ್ನು ಪೂರೈಸಿದಲ್ಲಿ ಮಾತ್ರ ಆ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ನಿಯಮಗಳಂತೆ ಗರಿಷ್ಠ 05 ವರ್ಷಗಳಿಗೆ ಮಾತ್ರ ಮಾನ್ಯತೆ ನವೀಕರಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮುಂದುವರೆದು ಉಲ್ಲೇಖ- 7ರ ಸುತ್ತೋಲೆಯಂತೆ 2017-18 ರ ಪೂರ್ವದಲ್ಲಿ ನೋಂದಣಿ ಪಡೆದು ನಡೆಸಲಾಗುತ್ತಿರುವ ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳಿಗೆ ಮಾತ್ರ ಅನ್ವಯಿಸುವಂತೆ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ, ಅಗ್ನಿ ಸುರಕ್ಷತಾ ಸಮಾಪನ ಪತ್ರ, ಶಾಲಾ ನಿವೇಶನವು ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನಾ ಆದೇಶ ಹಾಗೂ ಅನುಮೋದಿತ ಕಟ್ಟಡ ನಕ್ಷೆಗಳನ್ನು ಒಂದು ವರ್ಷದೊಳಗೆ ಸಕ್ಷಮ ಪ್ರಾಧಿಕಾರದಿಂದ ಪಡೆದು ಸಲ್ಲಿಸುವ ಬಗ್ಗೆ ಶಾಲಾ ಆಡಳಿತ ಮಂಡಳಿಗಳು ಅಫಿಡವಿಟ್ ಅನ್ನು ಸಲ್ಲಿಸಿದಲ್ಲಿ ಸದರಿ ದಾಖಲೆಗಳಿಗೆ ಮಾತ್ರ ವಿನಾಯ್ತಿ ನೀಡಿ ಅಂತಹ ಶಾಲೆಗಳಿಗೆ ಷರತ್ತುಬದ್ಧವಾಗಿ ಒಂದು ವರ್ಷಕ್ಕೆ ಮಾತ್ರ ಮಾನ್ಯತೆ ನವೀಕರಿಸಲು ಸೂಚಿಸಿದೆ.
2023-24ನೇ ಸಾಲಿನ ಮಾನ್ಯತೆ ಪಡೆಯದಿರುವ ಶಾಲೆಗಳಿಗೆ ಸದರಿ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಿರಸ್ಕಾರಕ್ಕೆ ಅವಕಾಶ ನೀಡದಂತೆ ಎಲ್ಲಾ ಅಗತ್ಯ ಮಾಹಿತಿ/ದಾಖಲೆಗಳೊಂದಿಗೆ ತಂತ್ರಾಂಶದಲ್ಲಿ ನಿಗದಿತ ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಮಾನ್ಯತೆ/ಮಾನ್ಯತೆ ನವೀಕರಣ ಪಡೆಯಲು ಸಕ್ಷಮ ಪ್ರಾಧಿಕಾರಿಗಳು ಸೂಚನೆ ನೀಡುವುದು. ಈ ಅವಧಿಯ ನಂತರ ತಮ್ಮ ವ್ಯಾಪ್ತಿಯ ಯಾವುದೇ ಶಾಲೆ 2023-24 ನೇ ಸಾಲಿನ ಮಾನ್ಯತೆ ನವೀಕರಣ ಪಡೆಯದೇ ಇದ್ದಲ್ಲಿ ಅಂತಹ ಶಾಲೆಯ ವಿರುದ್ಧ ಸರ್ಕಾರದ ಪತ್ರ ಮತ್ತು ನಿಯಮಗಳನುಸಾರ ಅಗತ್ಯ ಕ್ರಮ ವಹಿಸಲು ಸೂಚಿಸಿದೆ.