ಬೆಂಗಳೂರು: ಹೊಸ ಮಾನ್ಯತೆ ಮತ್ತು ಮಾನ್ಯತೆ ನವೀಕರಣಕ್ಕೆ ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಪಡೆಯುವುದು ಸೇರಿ ಕೆಲವು ಷರತ್ತುಗಳ ಪಾಲನೆಗೆ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಮುಂದಿನ ಶೈಕ್ಷಣಿಕ ವರ್ಷದವರೆಗೆ ಕಾಲಾವಕಾಶ ನೀಡಿ ಹೈಕೋರ್ಟ್ ಆದೇಶಿಸಿದೆ.
ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು 2022ರ ಜೂನ್ 6ರಂದು ಶಿಕ್ಷಣ ಇಲಾಖೆ, ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಸಲ್ಲಿಸಿದ ಅರ್ಜಿಯನ್ನು ಇತ್ಯರ್ಥ ಪಡಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರ ಪೀಠ ಸೋಮವಾರ ಈ ಆದೇಶ ನೀಡಿದೆ.
ಸರ್ಕಾರದ ಸುತ್ತೋಲೆಯಲ್ಲಿ ಹೊಸ ಷರತುಗಳನ್ನು ವಿಧಿಸಿಲ್ಲ. ಆದರೆ, ಅವುಗಳನ್ನು ಪಾಲಿಸಲು ಅಥವಾ ಅಳವಡಿಸಿಕೊಳ್ಳಲು ಕಾಲಾವಕಾಶಬೇಕಿದೆ. ಮುಂದಿನ ಶೈಕ್ಷಣಿಕ ವರ್ಷದವರೆಗೆ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಕಾಲಾವಕಾಶ ನೀಡಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.