ಬೆಂಗಳೂರು: ಬಡ ಮಹಿಳೆಯ ಸಂಕಷ್ಟಕ್ಕೆ ಮರುಗಿದ ಹೈಕೋರ್ಟ್ 15 ಸಾವಿರ ರೂ.ಗೆ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದ ತಾಯಿ ವಿರುದ್ಧ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದುಪಡಿಸಿದೆ. ಆರ್ಥಿಕ ಸಂಕಷ್ಟದಿಂದ ಮಾರಾಟವೆಂದು ಮಹಿಳೆಯನ್ನು ಖುಲಾಸೆಗೊಳಿಸಿದೆ.
ಗಂಡನಿಂದ ದೂರವಾಗಿರುವ ದಿನಗೂಲಿ ಕಾರ್ಮಿಕ ಮಹಿಳೆಗೆ ಒಂದು ಗಂಡು, ಒಂದು ಹೆಣ್ಣು ಮಗುವಿತ್ತು. ಆರ್ಥಿಕ ಸಂಕಷ್ಟದ ಕಾರಣ ಮಕ್ಕಳಿಲ್ಲದ ಮಹಾರಾಷ್ಟ್ರ ದಂಪತಿಗೆ 15 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ. ಆದರೆ, ಕಾನೂನುಬದ್ಧವಾಗಿ ದತ್ತು ಪ್ರಕ್ರಿಯೆ ನಡೆದಿಲ್ಲವೆಂದು ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ದೂರಿನ ಮೇರೆಗೆ 2019 ರಲ್ಲಿ ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಕೋರಿ ತೆಂಗಿನಕೊಪ್ಪ ಮೂಲದ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿ ಪ್ರಕರಣವನ್ನು ರದ್ದು ಮಾಡಿದೆ.
ಆರ್ಥಿಕ ಸಂಕಷ್ಟದಿಂದ ತನ್ನ ಮಗುವನ್ನು ಮಹಿಳೆ ಮಾರಾಟ ಮಾಡಿದ್ದಾಳೆ. ಮಗು ಪಡೆದುಕೊಂಡ ದಂಪತಿ ಕಳ್ಳ ಸಾಗಾಣೆಗೆ ಬಳಸಿಲ್ಲ. ದಂಪತಿಯ ಉದ್ದೇಶ ದತ್ತು ಪಡೆದುಕೊಳ್ಳುವುದಷ್ಟೇ ಎಂಬುದು ತಿಳಿಯುತ್ತದೆ ಎಂದು ಹೈಕೋರ್ಟ್ ಹೇಳಿದೆ. ಶಿಶು ಪಡೆದುಕೊಂಡವರು ಕಾನೂನು ಬದ್ಧ ದತ್ತು ಪ್ರಕ್ರಿಯೆ ಪಡೆದಿಲ್ಲ ಎನ್ನುವುದು ಹೊರತಾಗಿ ಬೇರೆ ಸಮಸ್ಯೆ ಇಲ್ಲವೆಂದು ಮಹಿಳೆ ಪರ ವಕೀಲರು ವಾದ ಮಂಡಿಸಿದ್ದರು.