2021 ರಲ್ಲಿ ತೆಲುಗು ಚಿತ್ರರಂಗದಲ್ಲಿ ಧೂಳೆಬ್ಬಿಸಿದ್ದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಪುಷ್ಪ ಚಿತ್ರದ ಸೀಕ್ವೆಲ್ ಮತ್ತೊಮ್ಮೆ ದಾಖಲೆ ಬರೆಯಲು ಮುಂದಾಗಿದೆ. ಡಿಸೆಂಬರ್ 6 ರಂದು ಬಿಡುಗಡೆಯಾಗಲಿರುವ ಪುಷ್ಪ 2 ತೆರೆ ಮೇಲೆ ಪ್ರದರ್ಶನಕ್ಕೂ ಮುನ್ನ ಹಣ ಗಳಿಕೆಯಲ್ಲಿ ಮುಂದಿದೆ.
ಇತ್ತೀಚಿನ ವರದಿಗಳ ಪ್ರಕಾರ, ಶನಿವಾರದಂದು ಕೋಲ್ಕತ್ತಾ, ದೆಹಲಿ, ಮುಂಬೈ, ಚಂಡೀಗಢ, ಅಹಮದಾಬಾದ್ ಮತ್ತು ಪುಣೆಯಲ್ಲಿ ಚಿತ್ರ ಪ್ರದರ್ಶನಕ್ಕಾಗಿ ಬುಕ್ಮೈಶೋನಲ್ಲಿ ಟಿಕೆಟ್ಗಳು ಲಭ್ಯವಾದಾಗಿನಿಂದ ಮುಂಗಡ ಬುಕಿಂಗ್ನಲ್ಲಿ 30 ಕೋಟಿ ರೂಪಾಯಿ ಗಳಿಸಿದೆ. ಹೈದರಾಬಾದ್ನಲ್ಲಿ ಚಿತ್ರದ ಮುಂಗಡ ಬುಕ್ಕಿಂಗ್ ಭಾನುವಾರ ಆರಂಭವಾಗಿದ್ದು ಇನ್ನೂ ಹೆಚ್ಚಿನ ಹಣ ಗಳಿಕೆಯ ನಿರೀಕ್ಷೆಯಿದೆ.
ಉದ್ಯಮದ ಡೇಟಾ-ಟ್ರ್ಯಾಕಿಂಗ್ ಸೈಟ್ Sacnilk ಪ್ರಕಾರ ಹಿಂದಿ ಆವೃತ್ತಿಯು ಸುಮಾರು 50 ಪ್ರತಿಶತದಷ್ಟು ಹಣ ಪಡೆದಿದೆ. ನಂತರದ ಸ್ಥಾನದಲ್ಲಿ ಮೂಲ ತೆಲುಗು ಆವೃತ್ತಿಯಿದೆ. IMAX 2D ಮತ್ತು 3D ಸ್ವರೂಪಗಳಿಂದ ಚಿತ್ರಕ್ಕೆ ಗಣನೀಯ ಆದಾಯ ಬಂದಿದೆ.
ತೆಲಂಗಾಣವು ಟಿಕೆಟ್ ಗಳ ಪೂರ್ವ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, 9 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಟಿಕೆಟ್ಗಳು ಮಾರಾಟವಾಗಿವೆ. ಒಟ್ಟು ಪೂರ್ವ-ಮಾರಾಟದಲ್ಲಿ ಪಶ್ಚಿಮ ಬಂಗಾಳವು ಶೇಕಡಾ 21 ರಷ್ಟು, ದೆಹಲಿಯು ಶೇಕಡಾ 17 ಮತ್ತು ಮಹಾರಾಷ್ಟ್ರವು ಸುಮಾರು ಶೇಕಡಾ 15 ರಷ್ಟು ಹೊಂದಿವೆ.
ಬುಕ್ ಮೈ ಶೋ ಪ್ರಕಾರ, ಸೋಮವಾರ ಪ್ರೀ ಬುಕಿಂಗ್ ಆರಂಭ ಮಾಡಿದ ಕೇವಲ ಒಂದು ಗಂಟೆಯಲ್ಲಿ 21,000 ಟಿಕೆಟ್ಗಳು ಮಾರಾಟವಾಗಿವೆ.
ಸುಕುಮಾರ್ ನಿರ್ದೇಶಿಸಿದ, ಪುಷ್ಪ 2 ಅಲ್ಲು ಅರ್ಜುನ್ ಅವರ 2021 ರ ಚಿತ್ರ ಪುಷ್ಪ: ದಿ ರೈಸ್ನ ಮುಂದುವರಿದ ಭಾಗವಾಗಿದೆ, ಇದು ಭಾರತದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಗಳಿಸಿತು.
ಅಲ್ಲು ಅರ್ಜುನ್ ತಮ್ಮ ಪಾತ್ರವನ್ನು ಪುಷ್ಪರಾಜ್ ಆಗಿ ಪುನರಾವರ್ತಿಸಲು ಸಿದ್ಧರಾಗಿದ್ದರೆ, ರಶ್ಮಿಕಾ ಮತ್ತು ಫಹಾದ್ ಫಾಸಿಲ್ ಅವರು ಕ್ರಮವಾಗಿ ಶ್ರೀವಲ್ಲಿ ಮತ್ತು ಎಸ್ಪಿ ಭನ್ವರ್ ಸಿಂಗ್ ಶೇಖಾವತ್ ಆಗಿ ಮರಳಿದ್ದಾರೆ.