ಬೆಂಗಳೂರು: ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಸವಲತ್ತು-ನೆರವು ನೀಡಲು ನಾನು ಸದಾ ಸಿದ್ಧ. ರಾಜ್ಯ ಬಜೆಟ್ ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ನಿರಂತರ ಅನುದಾನ ನೀಡಿದ್ದೇವೆ. ರಾಜ್ಯದಿಂದ ಯಾರಾದರೂ ಒಲಂಪಿಕ್ಸ್ ನಲ್ಲಿ ದೇಶಕ್ಕೆ ಒಂದು ಚಿನ್ನ ತನ್ನಿ ಎಂದು ನಾಡಿನ ಕ್ರೀಡಾಳುಗಳಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಒಲಂಪಿಕ್ ಸಂಸ್ಥೆ ಆಯೋಜಿಸಿದ್ದ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ. ಮೀಸಲಿಟ್ಟಿದ್ದೀವಿ. ಬೆಳ್ಳಿ ಪದಕ ಪಡೆದವರಿಗೆ 4 ಕೋಟಿ ರೂ. ಇಟ್ಟಿದ್ದೇವೆ. ಆದರೆ ಯಾರೂ ಪದಕ ತರ್ತಾನೇ ಇಲ್ಲ. ದೇಶಕ್ಕೆ ಯಾರಾದರೂ ಚಿನ್ನ ಗೆದ್ದು ತನ್ನಿ ಎಂದು ಹೇಳಿದ್ದಾರೆ.
ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬೇಕು ಎನ್ನುವ ಪ್ರೋತ್ಸಾಹದಾಯಕ ಉದ್ದೇಶದಿಂದ ಕರ್ನಾಟಕ ಒಲಂಪಿಕ್ ಸಂಸ್ಥೆ 22 ವರ್ಷಗಳಿಂದ ಈ ಪ್ರಶಸ್ತಿಗಳನ್ನು ನೀಡುತ್ತಿದೆ. ಗೋವಿಂದರಾಜು ಅವರು ಒಲಂಪಿಕ್ ಸಂಸ್ಥೆ ಅಧ್ಯಕ್ಷರಾಗಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ನಿರಂತರ ಶ್ರಮಿಸುತ್ತಿದ್ದಾರೆ. ನಾನು ಬಜೆಟ್ ರೂಪಿಸುವಾಗ ಚರ್ಚೆಯಲ್ಲಿ ಕುಳಿತು ಕ್ರೀಡಾಕ್ಷೇತ್ರಕ್ಕೆ ಅಗತ್ಯವಾದ ಎಲ್ಲವನ್ನೂ ಸೇರಿಸುತ್ತಾರೆ. ನಾನು ಕ್ರೀಡಾಪಟು ಅಲ್ಲದಿದ್ದರೂ ಕ್ರೀಡಾಪ್ರೇಮಿ. ನಾನು ಶಾಲಾ, ಕಾಲೇಜಿನಲ್ಲಿ ಎಲ್ಲಾ ಕ್ರೀಡೆಗಳಲ್ಲೂ ಭಾಗವಹಿಸುತ್ತಿದ್ದೆ. ಒಂದೂ ಪ್ರಶಸ್ತಿ ಬರಲಿಲ್ಲ. ಆದರೆ ಶಾಸಕರ ಕ್ರೀಡಾಕೂಟದಲ್ಲಿ ಸಿಕ್ಕಾಪಟ್ಟೆ ಪ್ರಶಸ್ತಿ ಬಂದಿತ್ತು ಎಂದು ಹೇಳಿದ್ದಾರೆ.
ಕ್ರೀಡೆಯಲ್ಲಿ ಸಣ್ಣ ಪುಟ್ಟ ದೇಶಗಳೆಲ್ಲಾ ಬಹಳ ಮುಂದಿವೆ. ಆದರೆ, ಭಾರತದಂತಹ ದೊಡ್ಡ ದೇಶಕ್ಕೆ ಒಲಂಪಿಕ್ ನಲ್ಲಿ ಒಂದೂ ಚಿನ್ನ ಬರಲಿಲ್ಲ ಎನ್ನುವುದು ಬೇಸರದ ಸಂಗತಿ. ಹೀಗಾಗಿ ನಾನು ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಇರುವ ಎಲ್ಲಾ ಅನುಕೂಲ ಕಲ್ಪಿಸಿಕೊಡಲು ಸಿದ್ಧ. ರಾಜ್ಯದ ಕ್ರೀಡಾಪಟುಗಳು ದೇಶಕ್ಕೆ ಒಲಂಪಿಕ್ಸ್ ನಲ್ಲಿ ಚಿನ್ನ ತರಲಿ ಎಂದು ಆಶಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜು ಅವರು, ಶಾಲಾ ಮಕ್ಕಳು ಕ್ರೀಡೆಯಲ್ಲಿ ಹೆಚ್ಚೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಕ್ರೀಡಾ ಮಕ್ಕಳಿಗೆ ಶೇ25 ರಷ್ಟು ಹಾಜರಾತಿ ಮತ್ತು 10 ಗ್ರೇಸ್ ಮಾರ್ಕ್ ನೀಡುವಂತೆ ನಿಯಮ ರೂಪಿಸಲು ಮನವಿ ಮಾಡಿದ್ದಾರೆ. ಈ ಬೇಡಿಕೆಗಳು ನ್ಯಾಯೋಚಿತವಾಗಿವೆ. ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಲಾಗುವುದು ಎಂದರು.