ಬಿಹಾರದಲ್ಲಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಚ್ಚಿಬೀಳಿಸುವಂತಹ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಆಘಾತಕಾರಿಯಾಗಿದೆ.
ಪಾಟ್ನಾದ ದಾನಪುರ ಪ್ರದೇಶದಲ್ಲಿ 60 ವರ್ಷದ ಉದ್ಯಮಿ ಪರಾಸ್ ರಾಯ್ ಅವರ ಬರ್ಬರ ಹತ್ಯೆಯಾಗಿದ್ದು, ಶಂಕಿತರು ಉದ್ಯಮಿ ಪರಾಸ್ ರಾಯ್ ಅವರನ್ನು ಹಿಂಬಾಲಿಸಿಕೊಂಡು ಬಂದು ಅವರು ಮನೆ ಬಾಗಿಲು ತಲುಪ್ತಿದ್ದಂತೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಮನೆಗೆ ಹಿಂದಿರುಗುತ್ತಿದ್ದ ಪರಾಸ್ ರಾಯ್ ಅವರನ್ನು ಎರಡು ದ್ವಿಚಕ್ರವಾಹನಗಳಲ್ಲಿ ಆರು ಮಂದಿ ಶಂಕಿತರು ಹಿಂಬಾಲಿಸಿಕೊಂಡು ಬಂದಿದ್ದರು. ಉದ್ಯಮಿ, ನಯಾ ಟೋಲಾ ಪ್ರದೇಶವನ್ನು ಸಮೀಪಿಸುತ್ತಿದ್ದಂತೆ ಅವರನ್ನು ಹಿಂಬಾಲಿಸಿದ ಹೆಲ್ಮೆಟ್ ಧಾರಿಗಳು ಶಸ್ತ್ರಾಸ್ತ್ರಗಳಿಂದ ಒಮ್ಮೆಲೇ ದಾಳಿ ಮಾಡಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿರುವಂತೆ ಓರ್ವ ಶಂಕಿತ ರಾಯ್ ಅವರ ಬೆನ್ನಿಗೆ ಗುಂಡು ಹಾರಿಸಿದ್ದಾನೆ. ಗಾಯಾಳು ನೆಲಕ್ಕೆ ಬೀಳ್ತಿದ್ದಂತೆ ಹಂತಕರು ಸ್ಥಳದಿಂದ ಪರಾರಿಯಾಗುವ ಮೊದಲು ಮತ್ತಷ್ಟು ಗುಂಡು ಹಾರಿಸಿದ್ದಾರೆ.
ನೆರೆಹೊರೆಯವರು ರಾಯ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗದೇ ಅವರು ಪ್ರಾಣಬಿಟ್ಟರು.
ಪೊಲೀಸ್ ವರಿಷ್ಠಾಧಿಕಾರಿ (ಪಶ್ಚಿಮ) ಘಟನೆ ಬಗ್ಗೆ ವಿವರಿಸುತ್ತಾ, ರಾಯ್ ಅವರ ಕಾಲು ಮತ್ತು ಬೆನ್ನಿಗೆ ಐದು ಬಾರಿ ಗುಂಡು ಹಾರಿಸಲಾಗಿದೆ. ಘಟನಾ ಸ್ಥಳದಿಂದ ಪತ್ತೆಯಾದ ಐದು ಬುಲೆಟ್ ಶೆಲ್‌ಗಳನ್ನು ವಿಧಿವಿಜ್ಞಾನ ತಜ್ಞರು ವಿಶ್ಲೇಷಣೆಗಾಗಿ ಸಂಗ್ರಹಿಸಿದ್ದಾರೆ. ರಾಯ್ ಅವರ ಪೂರ್ವಜರ ಜಮೀನಿನ ವಿಚಾರವಾಗಿ ದೀರ್ಘಕಾಲದ ವಿವಾದವೇ ಕೊಲೆಗೆ ಕಾರಣ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಯ್ ಅವರ ಮಗ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ದೂರಿನಲ್ಲಿ ರಾಯ್ ಅವರ ಒಂಬತ್ತು ಸೋದರ ಸಂಬಂಧಿಗಳನ್ನು ಶಂಕಿತರೆಂದು ಹೆಸರಿಸಲಾಗಿದೆ.