ತುಮಕೂರು: ಡಿಸೆಂಬರ್ 2ರಂದು ಸಿಎಂ ಸಿದ್ದರಾಮಯ್ಯ ತುಮಕೂರಿಗೆ ಭೇಟಿ ನೀಡಲಿದ್ದು, ಈ ವೇಳೆ ವಿವಿಧ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಿದ್ದಾರೆ. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಧಿಕ್ಕಾರ ಕೂಗಿದವರಿಗೆ ಲಕ್ಷ ಬಹುಮಾನ ನೀಡುವುದಾಗಿ ಬಿಜೆಪಿ ಶಾಸಕ ಸುರೇಶ್ ಗೌಡ ಘೋಷಿಸಿದ್ದಾರೆ ಎನ್ನಲಾದ ಆಡಿಯೋ ಭಾರಿ ವೈರಲ್ ಆಗಿದೆ.
ತುಮಕೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಗೋ ಬ್ಯಾಕ್ ಸಿದ್ದರಾಮಯ್ಯ ಹೋರಾಟ ನಡೆಸುವುದಾಗಿ ಬಿಜೆಪಿ-ಜೆಡಿಎಸ್ ಶಾಸಕರು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಬಿಜೆಪಿ ಶಾಸಕ ಸುರೇಶ್ ಗೌಡ ಕರೆ ನೀಡಿದ್ದಾರೆ ಎನ್ನಲಾದ ಆಡಿಯೋವನ್ನು ಮಾಜಿ ಶಾಸಕ ಗೌರಿಶಂಕರ್ ಬಿಡುಗಡೆ ಮಾಡಿದ್ದಾರೆ.
ಗ್ರಾಮ ಪಂಚಾಯಿತಿಗಳಿಗೆ ಬಸ್ ಕಳುಹಿಸುತ್ತೇನೆ. ಎಲ್ಲರೂ ಹೋರಾಟಕ್ಕೆ ಬರಬೇಕು. ಸಿಎಂ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಕಪ್ಪು ಬಾವುಟ ಪ್ರದರ್ಶನ ಮಾಡಬೇಕು. ಅಲ್ಲದೇ ಸಮಾವೇಶದಲ್ಲಿ ದಿಕ್ಕಾರ ಕೂಗಿದರೆ 1 ಲಕ್ಷ ಹಣ ನೀಡುತ್ತೇನೆ ಎಂದು ಕಾರ್ಯಕರ್ತರಿಗೆ ಹೇಳಲಾಗಿದೆ. ಸುರೇಶ್ ಗೌಡ ಅವರದ್ದು ಎನ್ನಲಾದ ಈ ಆಡಿಯೋ ಬಿಡುಗಡೆ ಮಾಡಿರುವ ಗೌರಿ ಶಂಕರ್, ಸಿಎಂ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದೇನಾ ಆರ್.ಎಸ್.ಎಸ್ ಹೇಳಿಕೊಟ್ಟಿರುವುದು? ಈ ಬಗ್ಗೆ ಪ್ರಕರಣ ದಾಖಲಾಗಿ, ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.