ಬೆಂಗಳೂರು: ಬಿಜೆಪಿ ಬಣ ರಾಜಕೀಯ ತಾರಕ್ಕೇರಿದ್ದು, ಉಭಯ ಬಣಗಳ ನಾಯಕರ ವಾಕ್ಸಮರ ಇನ್ನಷ್ಟು ಭಿನ್ನಮತಕ್ಕೆ ಕಾರಣವಾಗಿದೆ. ವಿಜಯೇಂದ್ರ ಡಿ.ಕೆ ಬಳಿ ಪತ್ರಕ್ಕೆ ಸಹಿ ಹಾಕಿಸಿರುವ ವಿಡಿಯೋ ಇದೆ ಎಂದಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ವಿಜಯೇಂದ್ರ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಯತ್ನಾಳ್ ಬಳಿ ವಿಡಿಯೋ ಇದ್ರೆ ಬಿಡುಗಡೆ ಮಾಡಲಿ. ಶುಭಮುಹೂರ್ತಕ್ಕೆ ಕಾಯೋದು ಬೇಡ, ತಕ್ಷಣ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.
ಡಿ.ಕೆ.ಶಿವಕುಮಾರ್ ಬಳಿ ಹೋಗಿ ವಿಜಯೇಂದ್ರ 20 ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ನನ್ನ ಬಳಿ ವಿಡಿಯೋ ಇದೆ ಎಂದು ಯತ್ನಾಳ್ ಹೇಳಿಕೆಗೆ ನೀಡಿದ್ದರು. ಇದೀಗ ಯತ್ನಾಳ್ ಹೇಳಿಕೆಗೆ ವಿಡಿಯೋ ಬಿಡುಗಡೆ ಮಾಡಿ ಎಂದು ವಿಜಯೇಂದ್ರ ತಾಕೀತು ಮಾಡಿದ್ದಾರೆ.
ಯತ್ನಾಳ್ ಬಣದ ನಾಯಕರು ಪ್ರತ್ಯೇಕ ಹೋರಾಟಗಳನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ. ಎಲ್ಲರೂ ಒಗ್ಗಟ್ಟಾಗಿ ಸೆರಿ ಹೋರಾಟ ಮಾಡುವುದು ಉಳಿತು ಎಂದರು. ಈ ರೀತಿ ಹೋರಾಟದಿಂದ ನಮಗೇನೂ ಆಗಲ್ಲ. ಇನ್ನೂ ಹತ್ತು ಜನರನ್ನು ಬೇಕಿದ್ದರೆ ಸೇರಿಸಿಕೊಳ್ಳಲಿ. ಆದರೆ ಪಕ್ಷದ ಕಾರ್ಯಕರ್ತರಿಗೆ ಅವಮಾನವಾಗಬಾರದು. ನಿಮ್ಮ ನಡೆ ಪಕ್ಷ ಸಂಘಟನೆ ನಿಟ್ಟಿನಲ್ಲಿ ಇರಬೇಕು ಎಂದು ಹೇಳಿದರು.
ನನ್ನ ಬಗ್ಗೆ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಹಾದಿ ಬೀದಿಯಲ್ಲಿ ನಿಂತು ಮಾತನಾಡುತ್ತಿದ್ದಾರೆ. ಇದರಿಂದ ಅವರಿಗೆ ದೊಡ್ಡ ಪದವಿ ಸಿಗಲಿದೆ ಎಂಬ ಭ್ರಮೆಯಲ್ಲಿದ್ದಾರೆ. ನಮ್ಮ ಪಕ್ಷದ ಕೆಲ ಮುಖಂಡರು ಯತ್ನಾಳ್ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಉಪಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರು, ರಾಜ್ಯದ ಜನತೆ ನೊಂದಿದ್ದಾರೆ. ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಜೊತೆ ಇದ್ದು, ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡುವುದನ್ನು ಬಿಟ್ತು ಪ್ರತ್ಯೇಕ ಹೋರಾಟದ ಹೆಸರಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.