ಅಯೋಧ್ಯೆ: ಕುಟುಂಬದಲ್ಲಿ ಜನನ ಮರಣದಿಂದಾಗಿ ಸಂಪ್ರದಾಯಗಳ ಪ್ರಕಾರ ಸೂತಕ ಉಂಟಾದರೆ ಅಂತಹ ಅರ್ಚಕರಿಗೆ ಅಯೋಧ್ಯ ರಾಮಮಂದಿರಕ್ಕೆ ಪ್ರವೇಶವಿಲ್ಲ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಹೇಳಿದ್ದಾರೆ.
ರಾಮಮಂದಿರದ ಪೂಜಾ ಕೈಂಕರ್ಯಗಳಿಗಾಗಿ ಕಳೆದ ಆರು ತಿಂಗಳಿಂದ ತರಬೇತಿ ಪಡೆದ ಅರ್ಚಕರನ್ನು ಶೀಘ್ರವೇ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ನೂತನವಾಗಿ ನಿಯೋಜನೆಗೊಳ್ಳುವ ಅರ್ಚಕರು ಧಾರ್ಮಿಕ ಸಮಿತಿಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಪರಿಣಿತರಿಂದ ಒಟ್ಟು 20 ಅರ್ಚಕರಿಗೆ ಆರು ತಿಂಗಳ ಧಾರ್ಮಿಕ ವಿಧಿ ವಿಧಾನ ಶಾಸ್ತ್ರಗಳ ಜ್ಞಾನದ ಕುರಿತು ತರಬೇತಿ ನೀಡಲಾಗಿದೆ. ರಾಮ ಮಂದಿರದೊಂದಿಗೆ ಆವರಣದಲ್ಲಿರುವ 18 ದೇವಾಲಯಗಳಲ್ಲಿ ನಿಯೋಜನೆಗೊಳ್ಳುವ ಅರ್ಚಕರು ಸರತಿ ಪ್ರಕಾರ ಪೂಜೆ ಸಲ್ಲಿಸಲಿದ್ದಾರೆ. ಹೀಗೆ ಪೂಜೆ ಸಲ್ಲಿಸುವ ಅರ್ಚಕರ ಮನೆಯಲ್ಲಿ ಜನನ ಮರಣ ಸಂಭವಿಸಿ ಸಂಪ್ರದಾಯದ ಪ್ರಕಾರ ಸೂತಕ ಉಂಟಾದಲ್ಲಿ ಅವರು ದೇವಾಲಯ ಆವರಣ ಪ್ರವೇಶಿಸುವಂತಿಲ್ಲ ಎಂದು ಹೇಳಿದ್ದಾರೆ.
ಪೂಜಾ ಕೈಂಕರ್ಯ ನಡೆಸುವವರು ಕೇಸರಿ ಬಣ್ಣದ ಉಣ್ಣೆಯ ಬಟ್ಟೆಯನ್ನು ಚಳಿಗಾಲದಲ್ಲಿ ತೊಡಬಹುದು. ಮೊಬೈಲ್ ಫೋನ್ ತರುವಂತಿಲ್ಲ. ಅದರಲ್ಲೂ ಅಂಡ್ರಾಯಿಡ್ ಫೋನ್ ಬಳಸುವಂತಿಲ್ಲ ಎಂಬ ನಿಯಮಗಳನ್ನು ರೂಪಿಸಿರುವುದಾಗಿ ಅವರು ತಿಳಿಸಿದ್ದಾರೆ.