ಬೆಂಗಳೂರು: ಬಗರ್ ಹುಕುಂ ಅಡಿ ಭೂಮಿ ಮಂಜೂರಾತಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಇದುವರೆಗೆ ನಡೆಸಿದ ಪರಿಶೀಲನೆಯಲ್ಲಿ 1.26 ಲಕ್ಷ ಅರ್ಜಿಗಳು ಮಾತ್ರ ಅರ್ಹ ಎಂದು ಪರಿಗಣಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಡಿಸೆಂಬರ್ 15ರೊಳಗೆ ರಾಜ್ಯದ ಎಲ್ಲಾ ಬಗರ್ ಹುಕುಂ ಸಮಿತಿಯ ಮುಂದೆ ಒಟ್ಟು 5 ಸಾವಿರ ಅರ್ಜಿಗಳನ್ನು ಮಂಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನವರಿ ವೇಳೆಗೆ ಈ ಸಂಖ್ಯೆಯನ್ನು 15 ರಿಂದ 20 ಸಾವಿರಕ್ಕೆ ಏರಿಸಲಾಗುವುದು ಎಂದು ಹೇಳಿದ್ದಾರೆ.
ಬಗರ್ ಹುಕುಂ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುತ್ತದೆ. ಸಾಗುವಳಿ ಚೀಟಿ ನೀಡುವ ಮೊದಲು ಜಮೀನಿಗೆ ಪೋಡಿ ಮಾಡಿಸಿ ಪಹಣಿಯಲ್ಲಿ ರೈತರ ಹೆಸರು ನಮೂದಿಸಿ ಜಮೀನು ನೊಂದಣಿ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಲ್ಲಿಕೆಯಾಗಿರುವ ಬಗರ್ ಹುಕುಂ ಅರ್ಜಿಗಳಲ್ಲಿ 5ರಿಂದ 6 ಲಕ್ಷ ಅರ್ಜಿಗಳು ಅನರ್ಹ ಎಂದು ಪರಿಗಣಿಸಲಾಗಿದೆ. ಅರ್ಜಿ ಸಲ್ಲಿಸಿದ ದಿನದಂದು 18 ವರ್ಷ ತುಂಬದವರ ಹೆಸರಿನಲ್ಲಿ 26 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದೇ ರೀತಿ ಈಗಾಗಲೇ 5 ಎಕರೆ ಭೂಮಿ ಹೊಂದಿದ್ದರೂ 26922 ಅರ್ಜಿಗಳು ಬಗರ್ ಹುಕುಂ ಅಡಿ ಬಂದಿವೆ. ಅರಣ್ಯ ಪ್ರದೇಶ ಮಂಜೂರಾತಿಗೆ 1.68 ಲಕ್ಷ ಅರ್ಜಿಗಳು, ನಗರ ಪರಿಮಿತಿ ಒಳಗಿನ ಭೂಮಿ ಮಂಜೂರಾತಿಗೆ 68,561 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕೃಷಿಕರಲ್ಲದ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸಲ್ಲಿಸಿದ ಅರ್ಜಿಗಳನ್ನು ಅನರ್ಹವೆಂದು ಪರಿಗಣಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.