ಶಿವಮೊಗ್ಗ: ಲಂಚ ಸ್ವೀಕರಿಸುತ್ತಿದ್ದ ಹೊಸನಗರ ತಾಲೂಕು ಸಹಾಯಕ ಸರ್ಕಾರಿ ಅಭಿಯೋಜಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹೊಸನಗರ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಕೆ. ರವಿ ಬಲೆಗೆ ಬಿದ್ದವರು. ರಿಪ್ಪನ್ ಪೇಟೆಯ ಅಂಜನ್ ಕುಮಾರ್ ಅವರ ವಿರುದ್ಧ ರಬ್ಬರ್ ಮರ ಲೀಸ್ ಮತ್ತು ರಾಜಕೀಯ ವಿಚಾರವಾಗಿ ಹೊಸನಗರ ತಾಲೂಕು ಗವಟೂರು ಗ್ರಾಮದಲ್ಲಿ ಗಣಪತಿ ಮತ್ತು ಇತರರೊಂದಿಗೆ ಜಗಳವಾಗಿದ್ದು, ಪ್ರಕರಣ ದಾಖಲಾಗಿದ್ದು, ರಿಪ್ಪನ್ ಪೇಟೆ ಪೊಲೀಸರು ಎರಡೂ ಪ್ರಕರಣಗಳಲ್ಲಿ ತನಿಖೆ ನಡೆಸಿ ಹೊಸನಗರ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಂಎಫ್ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಕಳೆದ ಅಕ್ಟೋಬರ್ 28ರಂದು ಅಂಜನ್ ಕುಮಾರ್ ತಮ್ಮ ಪ್ರಕರಣದಲ್ಲಿ ಸಾಕ್ಷಿದಾರರು ಮತ್ತು ಸ್ನೇಹಿತರೊಂದಿಗೆ ಹೊಸನಗರ ನ್ಯಾಯಾಲಯಕ್ಕೆ ಹೋಗಿ ಎಪಿಪಿ ರವಿ ಅವರನ್ನು ಭೇಟಿಯಾದಾಗ ರಾಜಿ ಮಾಡಿಕೊಳ್ಳುವಂತೆ ತಿಳಿಸಿ ಕೇಸು ಮುಗಿಸಿಕೊಡಲು 5,000 ರೂ. ಕೊಡಬೇಕು ಎಂದು ಹೇಳಿ ಒಂದು ಸಾವಿರ ರೂಪಾಯಿ ಮುಂಗಡ ತೆಗೆದುಕೊಂಡಿದ್ದಾರೆ.
ಡಿಸೆಂಬರ್ 29ರಂದು ಕೇಸ್ ವಿಚಾರಣೆ ಇದ್ದ ಹಿನ್ನೆಲೆಯಲ್ಲಿ ಎಪಿಪಿ ರವಿ ಅವರ ಚೇಂಬರ್ ಗೆ ಹೋದಾಗ ಪುನಃ ಮೂರು ಸಾವಿರ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ಮೊಬೈಲ್ ನಲ್ಲಿ ಅಂಜನ್ ಕುಮಾರ್ ರೆಕಾರ್ಡ್ ಮಾಡಿಕೊಂಡಿದ್ದು, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
ರವಿ ತಮ್ಮ ಕಚೇರಿಯಲ್ಲಿ ಲಂಚದ ಹಣ ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲಂಚದ ಹಣವನ್ನು ಜಪ್ತಿ ಮಾಡಿದ್ದು, ಎಪಿಪಿ ರವಿ ಅವರನ್ನು ವಶಕ್ಕೆ ಪಡೆದು ಲೋಕಾಯುಕ್ತ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಕಾಶ್ ತನಿಖೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ ಚೌದರಿ ಎಂ.ಹೆಚ್. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸ್ ಇನ್ ಸ್ಪೆಕ್ಟರ್ ಗಳಾದ ಪ್ರಕಾಶ್, ಹೆಚ್.ಎಸ್. ಸುರೇಶ್, ಸಿಬ್ಬಂದಿಗಳಾದ ಯೋಗೇಶ್, ಟೀಕಪ್ಪ, ಸುರೇಂದ್ರ, ಪ್ರಶಾಂತ ಕುಮಾರ್, ಚೆನ್ನೇಶ, ಆದರ್ಶ್, ದೇವರಾಜ್, ಪ್ರಕಾಶ್ ಬಾರಿಮರದ, ಪುಟ್ಟಮ್ಮ, ಅಂಜಲಿ, ಜಯಂತ್, ಗೋಪಿ, ತರುಣ್ ಭಾಗವಹಿಸಿದ್ದರು.