ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಕಾಂಗ್ರೆಸ್ ಪಕ್ಷವು ಶುಕ್ರವಾರ ಪ್ರಕಟಿಸಿದೆ.
ಆಮ್ ಆದ್ಮಿ ಪಾರ್ಟಿ(ಎಎಪಿ) ಯೊಂದಿಗೆ ಯಾವುದೇ ಮೈತ್ರಿಯನ್ನು ತಳ್ಳಿಹಾಕಿದೆ. ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 70 ಸ್ಥಾನಗಳಲ್ಲಿ ಪಕ್ಷವು ಸ್ವಂತವಾಗಿ ಸ್ಪರ್ಧಿಸಲಿದೆ ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಹೇಳಿದ್ದಾರೆ.
ಚುನಾವಣೆಗೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು,. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆಯ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷವು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯನ್ನು ಮಹಾಭಾರತದಂತೆಯೇ ‘ಧರ್ಮಯುದ್ಧ’ಕ್ಕೆ ಹೋಲಿಸಿದ್ದರು. “ದೆಹಲಿ ವಿಧಾನಸಭಾ ಚುನಾವಣೆಯು ‘ಧರ್ಮಯುದ್ಧದಂತಿದೆ. ಕೌರವರಂತೆ ಅವರಲ್ಲಿ ಅಪಾರ ಹಣ ಮತ್ತು ಬಲವಿದೆ, ಆದರೆ ಪಾಂಡವರಂತೆ ದೇವರು ಮತ್ತು ಜನರು ನಮ್ಮೊಂದಿಗಿದ್ದಾರೆ” ಎಂದು ಹೇಳಿದ್ದರು.