ಬೆಳಗಾವಿ: ರಾಜ್ಯ ಮಹಿಳಾ ಹೋರಾಟಗಾರ್ತಿಯೊಬ್ಬರಿಗೆ ಯೋಧನೊಬ್ಬ ಪ್ರೀತಿ-ಪ್ರೇಮದ ಹೆಸರಲ್ಲಿ ಮೋಸ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಮಚ್ಚೆ ಗ್ರಾಮದ ಪ್ರಮೋದಾ ಹಜಾರೆಗೆ ಯೋಧ ಅಕ್ಷಯ್ ನಲವಡೆ ಎಂಬಾತನಿಂದ ಮೋಸವಾಗಿದ್ದು, ಸಂತ್ರಸ್ತ ಮಹಿಳೆ ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಬಿಜಗರ್ಣಿ ಗ್ರಾಮದ ಅಕ್ಷಯ್ ನಲವಡೆ ಎಂಬಾತ 6 ವರ್ಷಗಳ ಹಿಂದೆ ಫೇಸ್ ಬುಕ್ ಮೂಲಕ ಪ್ರಮೋದಾ ಹಜಾರೆಗೆ ಪರಿಚಯವಾಗಿದ್ದ. ತನಗಿಂತ 14 ವರ್ಷ ಹಿರಿಯಳಾದ ಪ್ರಮೋದಾ ಜೊತೆ ಅಕ್ಷಯ್ ಗೆ ಪ್ರೇಮಾಂಕುರವಾಗಿದೆ. ಮಹಿಳಾ ಪರ ಹೋರಾಟಗಾರ್ತಿಯಾಗಿದ್ದ ಪ್ರಮೋದಾ ಹಜಾರೆಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ ಅಕ್ಷಯ್, ಆಕೆಯೊಂದಿಗೆ ದೈಹಿಕ ಸಂಪರ್ಕವನ್ನೂ ಹೊಂದಿದ್ದ.
6 ವರ್ಷಗಳ ಹಿಂದೆ ತಮ್ಮ ಮನೆಯ ದೇವರ ಕೋಣೆಯಲ್ಲಿ ಅಕ್ಷಯ್ ನಲವಡೆ ಪ್ರಮೋದಾಳನ್ನು ವಿವಾಹವಾಗಿದ್ದ. ಬಳಿಕ ರಜೆ ಮೇಲೆ ಊರಿಗೆ ಬಂದಾಗ 15 ದಿನಗಳ ಕಾಲ ಪ್ರಮೋದಾ ಮನೆಯಲ್ಲಿಯೇ ಉಳಿದು ಹೋಗುತ್ತಿದ್ದ. ಪ್ರಮೋದಾಳನ್ನು ಮದುವೆಯಾಗಿರುವ ವಿಚಾರ ಅಕ್ಷಯ್ ಮನೆಯವರಿಗೂ ತಿಳಿದಿತ್ತಂತೆ. ಈ ನಡುವೆ ಪ್ರಮೋದಾ ಹಜಾರೆಗೆ ಅಕ್ಷಯ್ 9 ಯುವತಿಯರ ಜೊತೆ ಇರುವ ವಿಷಯ ಬೆಳಕಿಗೆ ಬಂದಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಎಲ್ಲರನ್ನೂ ಬಿಟ್ಟು ನಿನ್ನ ಜೊತೆಯೇ ಇರುವುದಾಗಿ ಹೇಳಿ ನಂಬಿಸಿದ್ದನಂತೆ.
ಮೊನ್ನೆ ರಜೆ ಮೇಲೆ ಬಂದ ಅಕ್ಷಯ್ ನಲವಡೆ ಬೇರೊಬ್ಬ ಯುವತಿ ಜೊತೆ ನಿಶ್ಚಿತಾರ್ಥವಾಗಿದ್ದಾನೆ. ವಿಷಯ ತಿಳಿದು ಪ್ರಮೋದಾ, ಅಕ್ಷಯ್ ಮನೆಗೆ ತೆರಳಿ ವಿಷಯ ತಿಳಿಸಿದ್ದಾಳೆ. ಈ ವೇಳೆ ಊರಿನ ಹಿರಿಯರು, ಕುಟುಂಬದವರು ಸರಿಪಡಿಸುವುದಾಗಿ ಹೇಳಿ ಕಳುಸಿದ್ದರು. ಈ ವೇಳೆ ನಿಶ್ಚಿತಾರ್ಥವಾಗಿರುವ ಯುವತಿಯ ಮದುವೆಯಾಗಲ್ಲ ಎಂದು ಅಕ್ಷಯ್ ಹೇಳಿದ್ದ. ಆದರೆ ಇಂದು ಅಕ್ಷಯ್ ವಿವಾಹವಾಗಿದ್ದಾನೆ ಎಂಬ ವಿಷಯ ಗೊತ್ತಾಗಿ ಪ್ರಮೋದಾ ಆತನ ಮನೆ ಬಳಿ ಹೋಗಿದ್ದಾರೆ. ಈ ವೇಳೆ ಅಕ್ಷಯ್ ಹಾಗೂ ಕುಟುಂಬದವರು ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ ಎಂಬುದು ತಿಳಿದುಬಂದಿದೆ.
ಇದರಿಂದ ನೊಂದಿರುವ ಸಂತ್ರಸ್ತೆ ಪ್ರಮೋದಾ ಹಜಾರೆ, ಯೋಧ ಅಕ್ಷಯ್ ನಲವಡೆ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಸಾಯುವವರೆಗೂ ಧರಣಿ ನಡೆಸುವುದಾಗಿ ಕಣ್ಣೀರಿಟ್ಟಿದ್ದಾರೆ. ತಾನು ಹಲವು ಮಹಿಳೆಯರ ಪರ ಹೋರಾಟ ನಡೆಸಿ ನ್ಯಾಯ ಕೊಡಿಸಿದ್ದೇನೆ. ಇಂದು ತನಗೆ ಅನ್ಯಾಯವಾಗುತ್ತಿದ್ದು, ತನ್ನ ನೆರವಿಗೆ ಬರುವಂತೆ ಪ್ರಮೋದಾ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.