ಬೆಂಗಳೂರು: ಡಿಸೆಂಬರ್ 9ರಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಹೆಚ್ಚು ದಿನ ಅಧಿವೇಶನ ನಡೆಸುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಡಿಸೆಂಬರ್ 9ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. 2 ವಾರಕ್ಕಿಂತ ಹೆಚ್ಚು ದಿನಗಳ ಕಾಲ ಅಧಿವೇಶನ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದೇವೆ ಎಂದರು.
ಈಗಾಗಲೇ ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ವಕ್ಫ್ ಆಸ್ತಿ ನೋಂದಣಿ, ಪಡಿತರ ಚೀಟಿ ಗೊಂದಲ, ಅಬಕಾರಿ ಇಲಾಖೆ ಹಗರಣದ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಕೇಳುತ್ತೇವೆ. ಅಧಿವೇಶನದಲ್ಲಿ ಹಲವಾರು ವಿಷಯಗಳು ಸಮಗ್ರ ಚರ್ಚೆಯಾಗಬೇಕು ಈ ನಿಟ್ಟಿನಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನವನ್ನು 2 ವಾರಗಳ ಕಾಲ ನಡೆಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.