ಬೆಂಗಳೂರು: ಬಿಎಂಟಿಸಿ ಅಧಿಕಾರಿಗಳು ಪ್ರತಿ ಮಾರ್ಗದಲ್ಲಿ ಬಸ್ ಸಂಚಾರದ ಸಮಯ ಹೆಚ್ಚಳ ಮಾಡುವ ಮೂಲಕ ಚಾಲಕರ ಒತ್ತಡ ಕಡಿಮೆ ಮಾಡಿದ್ದಾರೆ.
ಇತ್ತೀಚೆಗೆ ಬಿಎಂಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಟೈಮ್ ಬಾಂಡ್ ಒತ್ತಡದಿಂದಾಗಿ, ಕಡಿಮೆ ಸಮಯದಲ್ಲಿ ವೇಗವಾಗಿ ತೆರಳಲು ವೇಗವಾಗಿ ಬಸ್ ಚಾಲನೆ ಮಾಡಲಾಗುತ್ತಿದ್ದು, ಇದರಿಂದ ಅಪಘಾತ ಸಂಭವಿಸುತ್ತಿದ್ದವು. ಈಗ ವೇಗವಾಗಿ ನಿಗದಿತ ನಿಲ್ದಾಣ ತಲುಪಬೇಕೆಂಬ ಒತ್ತಡದಿಂದ ಚಾಲಕರು ನಿರಳಾಗಿದ್ದಾರೆ.
ಬಿಎಂಟಿಸಿ ಸಂಚಾರ ಮಾಡುವ 1800 ಮಾರ್ಗಗಳಲ್ಲಿಯೂ ಟೈಮ್ ಲಿಮಿಟ್ ಕಡಿತ ಮಾಡಲಾಗಿದೆ. ಈ ಹಿಂದೆ ಮೆಜೆಸ್ಟಿಕ್ ನಿಂದ ಉತ್ತರಹಳ್ಳಿಗೆ ಸಂಚರಿಸಲು 55 ನಿಮಿಷ ಕಾಲಾವಕಾಶ ನೀಡಲಾಗಿದ್ದು, ಇನ್ನು ಮುಂದೆ ಒಂದು ಗಂಟೆ 15 ನಿಮಿಷಕ್ಕೆ ವಿಸ್ತರಿಸಲಾಗಿದೆ. 20 ನಿಮಿಷ ಹೆಚ್ಚುವರಿ ಸಮಯ ನೀಡಲಾಗಿದೆ. ಪ್ರತಿ ಮಾರ್ಗದಲ್ಲಿ 15 ರಿಂದ 20 ನಿಮಿಷ ಹೆಚ್ಚಿನ ಸಮಯ ನೀಡಲಾಗಿದ್ದು, ಇದರಿಂದ ಅಪಘಾತ ಮತ್ತು ಹಲ್ಲೆ ಪ್ರಕರಣ ತಡೆಯಬಹುದಾಗಿದೆ ಎಂದು ಹೇಳಲಾಗಿದೆ.
ಈ ಹಿಂದೆ ನಡೆದ ಸಾಕಷ್ಟು ಹಲ್ಲೆ ಮತ್ತು ಅಪಘಾತಗಳಲ್ಲಿ ಬಿಎಂಟಿಸಿ ಚಾಲಕರು ನಿಗದಿತ ಸಮಯಕ್ಕೆ ನಿಲ್ದಾಣಕ್ಕೆ ತಲುಪಲು ವೇಗವಾಗಿ ಬಸ್ ಚಲಾವಣೆ ಮಾಡುತ್ತಿರುವುದು ಕಾರಣವೆಂಬ ಹಿನ್ನಲೆಯಲ್ಲಿ. ಬಿಎಂಟಿಸಿ 58000 ಟ್ರಿಪ್ ಗಳಲ್ಲಿಯೂ ಟೈಮ್ ಲಿಮಿಟ್ ಹೆಚ್ಚಳ ಮಾಡಲು ಬಿಎಂಟಿಸಿ ಮುಂದಾಗಿದೆ ಎಂದು ಹೇಳಲಾಗಿದೆ.