ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಪ್ರತಿಪಕ್ಷವೇ ಇಲ್ಲದಂತಾಗಿದೆ. ನವೆಂಬರ್ 25 ರಂದು ಅಧಿಕಾರಕ್ಕೆ ಬರಲಿರುವ ಮಹಾರಾಷ್ಟ್ರದ 15ನೇ ವಿಧಾನಸಭೆಯಲ್ಲಿ ಪ್ರತಿಪಕ್ಷ ಇಲ್ಲದಿರುವ ಸಾಧ್ಯತೆಯೇ ಹೆಚ್ಚಾಗಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಪಕ್ಷದ ಮಾನ್ಯತೆ ಪಡೆದುಕೊಳ್ಳಲು ಶೇಕಡ 10 ರಷ್ಟು ಅಂದರೆ 29 ಸ್ಥಾನಗಳನ್ನು ಪಕ್ಷವೊಂದು ಗಳಿಸಿರಬೇಕು. ಆದರೆ, ಈ ಬಾರಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ 231 ಸ್ಥಾನಗಳನ್ನು ಗಳಿಸಿದೆ. ಪ್ರತಿ ಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿಯ ಯಾವುದೇ ಪಕ್ಷ 29ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿಲ್ಲ. ಹೀಗಾಗಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಗುಜರಾತ್, ಮಣಿಪುರ, ನಾಗಾಲ್ಯಾಂಡ್ ಮತ್ತು ಸಿಕ್ಕಿಂನಲ್ಲಿ ಪ್ರತಿ ಪಕ್ಷಗಳೇ ಇಲ್ಲದಿರುವಂತೆ ಈ ಬಾರಿ ಮಹಾರಾಷ್ಟ್ರದಲ್ಲಿಯೂ ಪ್ರತಿಪಕ್ಷ ಇರುವ ಸಾಧ್ಯತೆ ಇಲ್ಲವೆನ್ನಲಾಗಿದೆ.