ನವದೆಹಲಿ: ಕೇಂದ್ರ ಸರ್ಕಾರವು 2024 -25ನೇ ಆರ್ಥಿಕ ವರ್ಷದಲ್ಲಿ ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ಅನುದಾನದಲ್ಲಿ 448.29 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ರಾಜ್ಯದ ಎಲ್ಲಾ 5949 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ ಈ ಅನುದಾನ ಬಿಡುಗಡೆ ಮಾಡಲಾಗಿದೆ.
ಭಾರತ ಸರ್ಕಾರವು ಪಂಚಾಯತ್ ರಾಜ್ ಸಚಿವಾಲಯ, ಜಲ ಶಕ್ತಿ ಸಚಿವಾಲಯ ಮೂಲಕ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯಗಳಿಗೆ 15ನೇ ಹಣಕಾಸು ಆಯೋಗದ ಅನುದಾನವನ್ನು ಬಿಡುಗಡೆ ಮಾಡಲು ಶಿಫಾರಸು ಮಾಡುತ್ತದೆ. ನಂತರ ಅದನ್ನು ಹಣಕಾಸು ಸಚಿವಾಲಯ ಬಿಡುಗಡೆ ಮಾಡುತ್ತದೆ. ಮಂಜೂರಾದ ಅನುದಾನವನ್ನು ಒಂದು ಆರ್ಥಿಕ ವರ್ಷದಲ್ಲಿ ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನೈರ್ಮಲ್ಯ ಮತ್ತು ಬಯಲು ಮಲವಿಸರ್ಜನೆ ಮುಕ್ತ ಗ್ರಾಮ ನಿರ್ವಹಿಸುವುದು, ಮನೆ ತ್ಯಾಜ್ಯದ ನಿರ್ವಹಣೆ ಮತ್ತು ಸಂಸ್ಕರಣೆ, ಚರಂಡಿ, ಶೌಚಾಲಯ ನಿರ್ವಹಣೆ, ಕುಡಿಯುವ ನೀರು ಸರಬರಾಜು, ಮಳೆ ನೀರು ಕೊಯ್ಲು ಮತ್ತು ನೀರಿನ ಮರುಬಳಕೆ ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿಗಳು ಈ ಅನುದಾನ ಬಳಸಿಕೊಳ್ಳಲಿವೆ ಎಂದು ಹೇಳಲಾಗಿದೆ.